ಮೊಂಟೆಪದವು ಗುಡ್ಡ ಕುಸಿತ ಪ್ರಕರಣ: ತಾಯಿ-ಮಕ್ಕಳ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ

Spread the love

ಮೊಂಟೆಪದವು ಗುಡ್ಡ ಕುಸಿತ ಪ್ರಕರಣ: ತಾಯಿ-ಮಕ್ಕಳ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ

ಕೊಣಾಜೆ: ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿರುವ ದುರಂತದಲ್ಲಿ ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ತಾಯಿ, ಇಬ್ಬರು ಪುಟಾಣಿ ಮಕ್ಕಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಗುಡ್ಡ ಮತ್ತಷ್ಟು ಕುಸಿಯುವ ಭೀತಿಯು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಅಲ್ಲದೇ ಕಾಂತಪ್ಪ ಪೂಜಾರಿಯವರ ಈ ಮನೆಯಿರುವ ಪ್ರದೇಶಕ್ಕೆ ಜೇಸಿಬಿ ಸೇರಿದಂತೆ ರಕ್ಷಣಾ ವಾಹನಗಳನ್ನು ಕೊಂಡೊಯ್ಯುವುದು ಸಾಧ್ಯವಾಗದಿರುವುದು ಕಾರ್ಯಾಚರಣೆಯನ್ನು ಕ್ಲಿಷ್ಟಕರಗೊಳಿಸಿದೆ.

ಕಾಂತಪ್ಪ ಪೂಜಾರಿಯವರ ಮಗ ಸೀತಾರಾಮರ ಪತ್ನಿ ಅಶ್ವಿನಿ ಹಾಗೂ 3 ಹಾಗೂ 2 ವರ್ಷದ ಇಬ್ಬರು ಮಕ್ಕಳು ಕುಸಿದ ಮಣ್ಣು ಮತ್ತು ಮನೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ವೈದ್ಯರ ತಂಡವು ಅವಶೇಷಗಳಡಿಯಲ್ಲಿ ಸಿಲುಕಿರುವ ತಾಯಿ ಮಕ್ಕಳಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments