ಮೊದಲ ಕೋವಿಡ್–19 ರೋಗಿ ಗುಣಮುಖ – ಇಂದು ಆಸ್ಪತ್ರೆಯಿಂದ ಬಿಡುಗಡೆ: ಡಿಸಿ ಸಿಂಧೂ ಬಿ.ರೂಪೇಶ್‌

Spread the love

ಮೊದಲ ಕೋವಿಡ್–19 ರೋಗಿ ಗುಣಮುಖ – ಇಂದು ಆಸ್ಪತ್ರೆಯಿಂದ ಬಿಡುಗಡೆ: ಡಿಸಿ ಸಿಂಧೂ ಬಿ.ರೂಪೇಶ್‌

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್‌–19 ಸೋಂಕಿತ ಭಟ್ಕಳದ ಯುವಕ ಸಂಪೂರ್ಣ ಗುಣಮುಖವಾಗಿದ್ದು, ಸೋಮವಾರ (ಇದೇ 6) ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ಮಾರ್ಚ್‌ 19ರಂದು ದುಬೈನಿಂದ ಬಂದಿದ್ದ ಭಟ್ಕಳದ 22 ವರ್ಷದ ವ್ಯಕ್ತಿಯನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ರೋಗ ಲಕ್ಷಣಗಳು ಕಂಡು ಬಂದಿದ್ದರಿಂದ ನೇರವಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಯುವಕನಿಗೆ ಕೋವಿಡ್‌–19 ಸೋಂಕು ತಗುಲಿರುವುದು ಮಾರ್ಚ್‌ 22ರಂದು ದೃಢಪಟ್ಟಿತ್ತು.

ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಯ ಬಳಿಕ ಇದೀಗ ಈ ಯುವಕ ಗುಣಮುಖನಾಗಿದ್ದಾನೆ. ಇದೇ 2 ಮತ್ತು 3ರಂದು ಈ ಯುವಕನ ಗಂಟಲು ದ್ರವದ ಮಾದರಿಯನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ಇಲ್ಲದೇ ಇರುವುದು ಎರಡೂ ವರದಿಗಳಲ್ಲಿ ಖಚಿತವಾಗಿದೆ. ಸಂಪೂರ್ಣವಾಗಿ ಗುಣಮುಖನಾಗಿರುವ ಯುವಕನನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 12 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಇದರಲ್ಲಿ 10 ತಿಂಗಳ ಮಗು ಸೇರಿದೆ. ಈ ಪೈಕಿ ಕಾಸರಗೋಡು ಜಿಲ್ಲೆಯ ನಾಲ್ವರಿದ್ದು, ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿ, ಪುತ್ತೂರು ತಾಲ್ಲೂಕಿನ ಆರ್ಯಾಪು, ಬಂಟ್ವಾಳ ತಾಲ್ಲೂಕಿನ ತುಂಬೆ, ಉಳ್ಳಾಲ ಸಮೀಪದ ತೊಕ್ಕೊಟ್ಟು, ಸುಳ್ಯ ತಾಲ್ಲೂಕಿನ ಅಜ್ಜಾವರ ಗ್ರಾಮದ ತಲಾ ಒಬ್ಬರಿಗೆ ಸೋಂಕು ದೃಢ ಪಟ್ಟಿದೆ. ಇದರ ಜತೆಗೆ ದುಬೈನಿಂದ ಬಂದಿದ್ದ ಉಡುಪಿಯ 63 ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದೆ.

ಈ ಪೈಕಿ ಮಗುವಿನ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. 14 ಹಾಗೂ 15 ದಿನದ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಸೋಂಕು ಇಲ್ಲದೇ ಇರುವುದು ದೃಢಪಟ್ಟಲ್ಲಿ ಮಗುವನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಉಳಿದ ಎಲ್ಲ ರೋಗಿಗಳ ಆರೋಗ್ಯವೂ ಸ್ಥಿರವಾಗಿದ್ದು, ಯಾವುದೇ ರೋಗಿಯನ್ನು ವೆಂಟಿಲೇಟರ್‌ ವ್ಯವಸ್ಥೆಯ ನೆರವಿನಲ್ಲಿ ಇಡಲಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.


Spread the love