ಮ್ಯಾಟ್ರಿಮೋನಿ ಮೂಲಕ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ವಂಚನೆ: ಆರೋಪಿಗಳ ಬಂಧನ
ಮಂಗಳೂರು: ಮ್ಯಾಟ್ರಿಮೋನಿ ಆನ್ಲೈನ್ ಪ್ಲಾಟ್ಫಾರಂ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಸರಣಿ ಮೋಸಗಾರನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ನೊಂದ ಮಹಿಳೆಗೆ ಸುಶಾಂತ್ ಪೂಜಾರಿ ಎಂಬಾತ ಮ್ಯಾಟ್ರಿಮೋನಿ ಆನ್ಲೈನ್ ಪ್ಲಾಟ್ಫಾರಂ ಮೂಲಕ ಪರಿಚಯವಾಗಿ, ಮಹಾರಾಷ್ಟ್ರದ ಘನಸೋಳಿ, ನವ ಮುಂಬೈನಲ್ಲಿ ದಿನಾಂಕ 02-02-2025ರಂದು ಮದುವೆಯಾಗಿದ್ದನು. ಬಳಿಕ ನಂಬಿಕೆ ಮೂಡಿಸಿ ಹಂತ ಹಂತವಾಗಿ ರೂ.6,60,000 ಹಣ ಪಡೆದುಕೊಂಡು ದಿನಾಂಕ 15-11-2025ರಂದು ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಆತನ ಬಗ್ಗೆ ವಿಚಾರಿಸಿದಾಗ, ಇದೇ ರೀತಿ ಹಲವು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಹಾಗೂ ಈ ಹಿಂದೆ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ನೊಂದ ಮಹಿಳೆ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2025ರ ಅಡಿಯಲ್ಲಿ BNS ಕಲಂ 318(4), 316(2), 316(1), 336(3), 340(1) ರಂತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ವೇಳೆ ಆರೋಪಿತ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ. ಕರ್ಕೇರಾ (32) ಎಂಬಾತನನ್ನು ದಿನಾಂಕ 05-02-2026ರಂದು ಪತ್ತೆಹಚ್ಚಿ ದಸ್ತಗಿರಿ ಮಾಡಲಾಗಿದೆ. ವಿಚಾರಣೆ ವೇಳೆ ಆತ 2021ರಲ್ಲಿ ಉಡುಪಿಯ ಯುವತಿಯೊಬ್ಬಳನ್ನು ಮದುವೆಯಾಗಿರುವುದು, ಉಡುಪಿ, ಮುಂಬೈ, ಬೆಂಗಳೂರು ಹಾಗೂ ಕಾರ್ಕಳ ಸೇರಿದಂತೆ ವಿವಿಧ ಕಡೆಗಳಲ್ಲಿ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಪ್ರಕರಣದಲ್ಲಿ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು, ಆರೋಪಿತ ಸುಶಾಂತ್ ತನ್ನ ಅಳಿಯನೆಂದು ಹೇಳಿಕೊಂಡು ಪಿರ್ಯಾದಿದಾರರು ಹಾಗೂ ಕುಟುಂಬದವರನ್ನು ನಂಬಿಸಿ, ಮುಂಬೈನಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಮದುವೆ ನಡೆಸಲು ಸಹಕಾರ ನೀಡಿದ್ದಾನೆ ಎಂಬ ಆರೋಪದ ಮೇರೆಗೆ ಆತನನ್ನೂ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ಧ ಮಂಗಳೂರು ಊರ್ವಾ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣೆಗಳಲ್ಲಿ ವಂಚನೆ, ಕಳ್ಳತನ, ಲೈಂಗಿಕ ಅಪರಾಧ, ಮಾನವ ಸಾಗಣೆ, ಇಮ್ಮೋರಲ್ ಟ್ರಾಫಿಕಿಂಗ್ ಆಕ್ಟ್ ಹಾಗೂ ಪೋಕ್ಸೋ ಕಾಯ್ದೆಯಡಿ ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿರುವುದು ತಿಳಿದುಬಂದಿದೆ.













