ಯುವಕ ಕಾಣೆ: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Spread the love

ಯುವಕ ಕಾಣೆ: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ಮನೆಗೆ ವಾಪಸ್ಸಾಗದೆ ಕಾಣೆಯಾಗಿರುವ ಘಟನೆ ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಈ ಕುರಿತು ಕೊಣಾಜೆ ಗ್ರಾಮ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ (62) ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ.

ದೂರಿನ ಪ್ರಕಾರ, ವಿವೇಕ್ ಶೆಟ್ಟಿಗಾರ್ ಅವರು ಮಂಗಳೂರಿನ ಕದ್ರಿ ಬಳಿ ಇರುವ ವೇದ ಮೊರ್ಟಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದರು. ಅದರಂತೆ ಮಾರ್ಚ್ 9ರಂದು ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿದ್ದ ವಿವೇಕ್ ರಾತ್ರಿ ಸುಮಾರು 9.30ಕ್ಕೆ ತಾಯಿಗೆ ದೂರವಾಣಿ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಮನೆಗೆ ಬರಲು ತಡವಾಗಬಹುದು, ನನ್ನಿಗಾಗಿ ಕಾಯಬೇಡಿ ಎಂದು ಹೇಳಿದ್ದರು.

ಆದರೆ ರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಮರುದಿನ ಮಾರ್ಚ್ 10ರಂದು ಕೂಡ ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕವಾಗಿರಲಿಲ್ಲ. ಬಳಿಕ ವಿವೇಕ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ಕರೆ ಮಾಡಿ ವಿಚಾರಿಸಿದಾಗ ಕಂಪೆನಿ ಬಂದ್ ಆಗಿರುವುದಾಗಿ ತಿಳಿದುಬಂದಿದೆ.

ನಂತರ ಕುಟುಂಬಸ್ಥರು ಹಾಗೂ ಪರಿಚಿತರ ಬಳಿ ವಿಚಾರಿಸಿದರೂ ವಿವೇಕ್ ಶೆಟ್ಟಿಗಾರ್ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಅವರು ಕಾಣೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 21/2026ರಂತೆ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಣೆಯಾದವರ ವಿವರ:

ಹೆಸರು: ವಿವೇಕ್ ಶೆಟ್ಟಿಗಾರ್

ತಂದೆ: ದಿನೇಶ್ ಶೆಟ್ಟಿಗಾರ್

ವಯಸ್ಸು: 32 ವರ್ಷ

ಎತ್ತರ: ಸುಮಾರು 5.7 ಅಡಿ

ಚಹರೆ: ಸದೃಢ ಶರೀರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಗಡ್ಡ ಇರುತ್ತದೆ

ಧರಿಸಿದ್ದ ಉಡುಪು: ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಚುಕ್ಕೆಗಳಿರುವ ಉದ್ದತೋಳಿನ ಶರ್ಟ್

ತಿಳಿದಿರುವ ಭಾಷೆಗಳು: ತುಳು, ಕನ್ನಡ

ಕಾಣೆಯಾದ ವಿವೇಕ್ ಶೆಟ್ಟಿಗಾರ್ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536 / 9480802350 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments