ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಸದ್ಯದಲ್ಲೇ ಜಾರಿ: ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯದಲ್ಲಿ ಹೊಸ ಕ್ರೀಡಾ ನೀತಿಯನ್ನು ಅನುಷ್ಠಾನಕ್ಕೆ ತರುವ ಪೂರಕ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಅದು ಜಾರಿಗೆ ಬರಲಿದೆ, ಇದರಿಂದಾಗಿ ರಾಜ್ಯದ ಲಕ್ಷಾಂತರ ಕ್ರೀಡಾಳುಗಳು ಶೈಕ್ಷಣಿಕ ಮತ್ತು ಔದ್ಯೋಗಿಕ ಲಾಭ ಪಡೆಯಲಿದ್ದಾರೆ ಎಂದು ಕರ್ನಾಟಕ ಸರಕಾರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಒಲಂಪಿಕ್ಸ್‍ನಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದವರಿಗೆ ಕ್ರಮೇಣವಾಗಿ ‘ಎ’ ಮತ್ತು ‘ಬಿ’ ಗ್ರೇಡ್ ಹುದ್ದೆಗಳಿಗೆ ನೇರವಾಗಿ ಪ್ರವೇಶ ಪಡೆಯುವ ಹಾಗೆ ಯೋಜನೆಗಳನ್ನು ಅತೀ ಶೀಘ್ರದಲ್ಲಿ ರೂಪಿಸಲಾಗುವುದು ಎಂದರು.
ಪ್ರಾಂಶುಪಾಲ .ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಮಂಡಳಿಯ ಪ್ರಖ್ಯಾತ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ ಕಿಶೋರ್ ಕುಮಾರ್ ಸಿ.ಕೆ, ಟೀಚರ್ಸ್ ಕೋ-ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಕುರ್ಕಾಲ್, ಕಾಲೇಜು ಅಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ, ಮತ್ತಿತ್ತರು ಉಪಸ್ಥಿತರಿದ್ದರು. ಪಂದ್ಯಾಟದ ಸಂಚಾಲಕ ರಾಮಚಂದ್ರ ಪಾಟ್ಕರ್ ಸ್ವಾಗತಿಸಿ, ಡಾ ಎಚ್.ಕೆ. ವೆಂಕಟೇಶ್ ವಂದಿಸಿದರು. ಡಾ ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.













