ರಾ.ಹೆದ್ದಾರಿ ಗುಂಡಿಗೆ ಮಹಿಳೆ ಬಲಿ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ; ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನ

Spread the love

ರಾ.ಹೆದ್ದಾರಿ ಗುಂಡಿಗೆ ಮಹಿಳೆ ಬಲಿ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ; ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆ, ಹೆದ್ದಾರಿಗಳ ಅವ್ಯವಸ್ಥೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಿತು. ನಂತೂರು ವೃತ್ತದಲ್ಲಿ ಪ್ರಾರಂಭವಾದ ಮೆರವಣಿಗೆಯು ಎನ್‌ಎಚ್‌ಎಐ ಕಚೇರಿಯವರೆಗೆ ಸಾಗಿತು. ಅಣುಕು ಮೃತದೇಹವನ್ನು ಹೊತ್ತುಕೊಂಡು ಪ್ರತಿಭಟನಾಕಾರರು ಘೋಷಣೆ ಕೂಗಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಎಚ್‌ಎಐ ಕಚೇರಿಯತ್ತ ಮುತ್ತಿಗೆ ಯತ್ನಿಸಿದ ವೇಳೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತಡೆ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಕೆಲ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳಾಂತರಿಸಿದರು.

ಮೆರವಣಿಗೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, “ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ಬಿಡುಗಡೆಯಾದರೂ, ದುರಸ್ತಿ ಕಾರ್ಯ ನಿರ್ಲಕ್ಷ್ಯವಾಗಿದೆ. ನಿರ್ವಹಣೆ ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಗುಂಡಿಗಳಿಂದಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಮತೀಯ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ, ಆದರೆ ಇಂತಹ ಪ್ರಾಣಹಾನಿ ವಿಷಯಗಳಲ್ಲಿ ಮೌನವಾಗಿದ್ದಾರೆ” ಎಂದು ಆರೋಪಿಸಿದರು.

ಅವರು ಮೃತ ಮಹಿಳೆಯ ಕುಟುಂಬ ಸೇರಿದಂತೆ ಇತ್ತೀಚಿನ ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, “ಸುರತ್ಕಲ್ ಟೋಲ್ ಗೇಟ್ ತೆರವು ಮಾಡಿದ ಕಾರಣ ದುರಸ್ತಿ ಹಣ ಇಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಹೇಳಿರುವುದು ತೀರಾ ಅಸಮಂಜಸ. ಜನರ ಪ್ರಾಣ ಹಾನಿ ತಪ್ಪಿಸಲು ತಕ್ಷಣ ಗುಂಡಿಗಳನ್ನು ಮುಚ್ಚಬೇಕು” ಎಂದು ಒತ್ತಾಯಿಸಿದರು.

ಮಿಥುನ್ ರೈ ನೇತೃತ್ವದ ಪ್ರತಿಭಟನಾಕಾರರು ಎನ್‌ಎಚ್‌ಎಐ ಕಚೇರಿಯ ಬಾಗಿಲಿಗೆ ಅಣುಕು ಮೃತದೇಹವನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, “ಈ ಸಾವು ಅಸಹಜವಾಗಿದ್ದು, ಎನ್‌ಎಚ್‌ಎಐ ಅಧಿಕಾರಿಗಳು ಹಾಗೂ ಬಿಜೆಪಿ ಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣ. ಕೇಂದ್ರ ಸರಕಾರವು ತಕ್ಷಣವೇ ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಹೆದ್ದಾರಿಯ ಗುಂಡಿಗಳು ಮುಚ್ಚುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಘೋಷಿಸಿದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಮಾತನಾಡಿ, “ಕಳೆದ ಹಲವು ತಿಂಗಳಿನಿಂದ ಹೆದ್ದಾರಿ ಗುಂಡಿಗಳಿಂದ ಅನೇಕರು ಗಾಯಗೊಂಡಿದ್ದಾರೆ. ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು, ಸಂಸದರು, ಸ್ಥಳೀಯ ಶಾಸಕರು ಮೌನವಾಗಿದ್ದಾರೆ. ಕೂಳೂರಿನಲ್ಲಿ ಮೃತಪಟ್ಟ ಮಹಿಳೆಯ ಮನೆಗೆ ಭೇಟಿ ನೀಡಿ ಸಾಂತ್ವನ ನೀಡುವ ಮಾನವೀಯ ಕಾಳಜಿಯನ್ನೂ ಬಿಜೆಪಿ ಪ್ರತಿನಿಧಿಗಳು ತೋರಿಲ್ಲ” ಎಂದು ಟೀಕಿಸಿದರು.


Spread the love
Subscribe
Notify of

0 Comments
Inline Feedbacks
View all comments