ಲೋಕಸಭಾ ಚುನಾವಣೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ – 76.06 % ಮತದಾನ

Spread the love

ಲೋಕಸಭಾ ಚುನಾವಣೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ – 76.06 % ಮತದಾನ

ಉಡುಪಿ: ಮೊದಲ ಹಂತದ ಲೋಕಸಭಾ ಚುನಾವಣೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ76.06 ಮತದಾನವಾಗಿರುವ ಕುರಿತು ವರದಿಗಳು ಲಭಿಸಿವೆ.

8 ವಿಧಾನಸಭಾ ಕ್ಷೇತ್ರದ ಒಟ್ಟು 1842 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಪ್ರಥಮ ಬಾರಿಗೆ ಮತ ಚಲಾಯಿಸುವ ಯುವ ಮತದಾರರು ಹಾಗೂ ಹಿರಿಯ ಮತದಾರರು ಸ್ವಯಂ ಪ್ರೇರಣೆಯಿಂದ ತಮ್ಮ ಹಕ್ಕು ಚಲಾಯಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.80, ಕುಂದಾಪುರದಲ್ಲಿ 79.10, ಕಾಪು 79.03, ಕಾರ್ಕಳ 78.50, ಚಿಕ್ಕಮಗಳೂರು ಶೇ.69, ಶೃಂಗೇರಿ 80.20, ಮೂಡಿಗೆರೆ 75.12 ಹಾಗೂ ತರೀಕೆರೆಯಲ್ಲಿ ಶೇ.73.20ರಷ್ಟು ಮತದಾನವಾಗಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.76.07ರಷ್ಟು ಮತದಾನವಾಗಿತ್ತು. ಹೀಗಾಗಿ ಈ ಸಲವೂ ಕಳೆದ ಬಾರಿಯಷ್ಟೇ ಮತದಾನವಾದಂತಾಗಿದೆ.

ಈ ಬಾರಿ ಅತ್ಯಧಿಕ ಮತದಾನವಾಗಿರುವುದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ. ಅಲ್ಲಿ ಶೇ.80.20ರಷ್ಟು ಮತದಾನವಾಗಿದೆ. ನಂತರದ ಸ್ಥಾನ ಕುಂದಾಪುರ ವಿಧಾನಸಭಾ ಕ್ಷೇತ್ರದ್ದು. ಅಲ್ಲಿ 79.10ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತ ಬಿದ್ದಿರುವುದು ತರೀಕೆರೆ ಕ್ಷೇತ್ರದಲ್ಲಿ. ಇಲ್ಲಿ ಶೇ.73.20ರಷ್ಟು ಮತ ಚಲಾವಣೆಯಾಗಿದೆ

ಜಿಲ್ಲೆಯಲ್ಲಿ ಈಗ ಕಾಣಿಸಿಕೊಂಡಿರುವ ಬಿರುಬಿಸಿಲು ಹಾಗೂ ಸಹಿಸಲಸಾಧ್ಯ ಸೆಖೆಯೊಂದಿಗೆ ಬೀಸುತಿರುವ ಬಿಸಿಗಾಳಿಯ ಕಾರಣಕ್ಕೆ ಜನತೆ ಇಂದು ಬೆಳಗ್ಗೆ ಮತದಾನ ಪ್ರಾರಂಭಗೊಂಡ ಕ್ಷಣದಿಂದಲೇ ಗುಂಪು ಗುಂಪಾಗಿ ಬಂದು ಮತ ಚಲಾಯಿಸಿದರು.

ಜನರು 11-12ಗಂಟೆಯೊಳಗೆ ಬಂದು ಮತ ಚಲಾಯಿಸಿ ತೆರಳಿದರೆ, ಇನ್ನುಳಿದ ಮಂದಿ ಮಧ್ಯಾಹ್ನ ಮೂರು ಗಂಟೆಯ ಬಳಿಕ ತಾಪಮಾನ ಸ್ವಲ್ಪ ತಗ್ಗಿದ ಮೇಲೆ ಮನೆಯಿಂದ ಹೊರಬಂದು ಮತ ಹಾಕಿದರು. ಹೀಗಾಗಿ 11 ಗಂಟೆಯಿಂದ ಮೂರು ಗಂಟೆಯವರೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮತದಾನ ಭಾಗಶ: ಸ್ಥಗಿತಗೊಂಡ ರೀತಿಯಲ್ಲಿತ್ತು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯು ಯಾವುದೇ ಗೊಂದಲಗಳಿಲ್ಲದೇ, ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲಾ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷದವರಿಗೆ, ಸಾರ್ವಜನಿಕರಿಗೆ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಂದಾಪುರ ತಾಲೂಕಿನಲ್ಲಿ ಶಾಂತಿಯುತ ಮತದಾನ

ವರದಿ: ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ಶುಕ್ರವಾರ ನಡೆದ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ. ನಕ್ಸಲ್ ಬಾಧಿತ, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳು ಇದ್ದರೂ ಎಲ್ಲಾ ಮತಗಟ್ಟೆಗಳಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಒಟ್ಟಾರೆ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಜಯಪ್ರಕಾಶ್ ಹೆಗ್ಡೆ ಕೊರ್ಗಿಯ ಮತಗಟ್ಟೆಯಲ್ಲಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಕೋಟತಟ್ಟುವಿನಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಬೆಳಿಗ್ಗೆ ಬಿರುಸಿನ ಮತದಾನ:
ಶುಕ್ರವಾರ ಮದುವೆ ಸೇರಿದಂತೆ ವಿವಿಧೆಡೆ ಕಾರ್ಯಕ್ರಮಗಳು ಇದ್ದುದರಿಂದ ಬಹುತೇಕ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದ 10 ಗಂಟೆಯವರೆಗೆ ಸರತಿ ಸಾಲು ಕಂಡು ಬಂದವು. 10 ಗಂಟೆಯ ಒಳಗೆ ಶೇ.15 ರಷ್ಟು ದಾಖಲೆಯ ಕ್ಷಿಪ್ರ ಮತದಾನ ನಡೆದಿತ್ತು. ಬೆಳಿಗ್ಗೆ ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಗಣನೀಯವಾಗಿ ಕಡಿಮೆಯಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ, ಮತದಾರರಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿಗಳು ಇದ್ದವು.

ಕಾರ್ಯಕರ್ತರ ಸೌಹಾರ್ದತೆ:
ನಗರ ಪ್ರದೇಶಗಳನ್ನು ಹೊರತುಪಡಿಸಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿನ ಮತಗಟ್ಟೆಯ ಹೊರಗೆ ರಾಜಕೀಯ ಪಕ್ಷದ ಕಾರ್ಯಕರ್ತರು ಸೇರಿದಂತೆ ಕಡಿಮೆ ಜನಸಂಖ್ಯೆ ಇತ್ತು. ಬೇರೆ ಬೇರೆ ರಾಜಕೀಯ ಪಕ್ಷಗಳ ಟೇಬಲ್ ಬಳಿ ಇದ್ದವರು ಪರಸ್ಪರ ಸೌಹಾರ್ದತೆಯಿಂದ ಇದ್ದರು.‌ ಮತಗಟ್ಟೆಗೆ ದೂರದಿಂದ ಬರುವವರಿಗೆ ಹಾಗೂ ಅಶಕ್ತರಿಗಾಗಿ ಅಲ್ಲಲ್ಲಿ ವಾಹನ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಬಾರಿಯಂತೆ ಚುನಾವಣಾ ಆಯೋಗ 80 ವರ್ಷ ದಾಟಿದವರು ಹಾಗೂ ದೈಹಿಕ ಅಸಮರ್ಥರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರೂ, ಹೆಚ್ಚಿನ ಮತಗಟ್ಟೆಯಲ್ಲಿ ವಯೋವೃದ್ಧ ಹಾಗೂ ವಿಶೇಷ ಚೇತನ ಮತದಾರರು ಮತದಾನಕ್ಕಾಗಿ ಬಂದಿದ್ದರು. ತಮ್ಮ ಕುಟುಂಬ ಸದಸ್ಯರ ನೆರವಿನಿಂದ ಅವರು ಮತದಾನದ ಹಕ್ಕು ಚಲಾಯಿಸಿದರು.

ಕುಂದಾಪುರದ ವಡೇರಹೋಬಳಿ, ತೆಕ್ಕಟ್ಟೆ ಹಾಗೂ ಹಾಲಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಶುಕ್ರವಾರ ನಡೆದ ಮದುವೆಯ ಸಂಭ್ರಮದಲ್ಲಿ ಇದ್ದ ನವ ವಧು-ವರರು ಮಂಟಪಕ್ಕೆ ತೆರಳುವ ಮೊದಲೆ ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದು ಈ ಬಾರಿಯ ವಿಶೇಷವಾಗಿತ್ತು.

ಅಲ್ಲಲ್ಲಿ ಗಮನ ಸೆಳೆದ ಸಖಿ ಮತಗಟ್ಟೆ:
ಕುಂದಾಪುರ, ಬಿದ್ಕಲ್‌ಕಟ್ಟೆ ಸೇರಿದಂತೆ ಕೆಲ ಮತಗಟ್ಟೆಯಲ್ಲಿ ಮತದಾರರನ್ನು ಆಕರ್ಷಿಸಲು ಮಾಡಲಾಗಿದ್ದ ಸಖಿ ಮತಗಟ್ಟೆ, ಸೆಲ್ಫಿ ಪಾಯಿಂಟ್, ಸಾಂಪ್ರದಾಯಿಕ ಮತಗಟ್ಟೆ ಹಾಗೂ ಚಿಣ್ಣರ ಅಂಗಳ ಮತದಾರರ ಗಮನ ಸೆಳೆದಿತ್ತು. ಹೊಸ ಮತದಾರರು ಖುಷಿ, ಖುಷಿಯಾಗಿ ಬಂದು ಮತದಾನದಲ್ಲಿ ಭಾಗವಹಿಸಿದ್ದರು. ದೇಶದ ದೊಡ್ಡ ಪ್ರಜಾತಂತ್ರ ಹಬ್ಬದಲ್ಲಿ ಭಾಗವಹಿಸಿದ ಮೊದಲ ಅನುಭವವನ್ನು ಹಂಚಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಕುಂದಾಪುರದ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಸಾಂಪ್ರದಾಯಕ ಮತಗಟ್ಟೆಯನ್ನಾಗಿ ಗುರುತಿಸಿ ಗರಿಗಳ ಚಪ್ಪರವನ್ನು ಮಾಡಿ ಪಾರಂಪರಿಕ ಬಳಕೆಯ ವಸ್ತುಗಳನ್ನು ಇಟ್ಟು, ರಂಗೋಲಿ ಬರೆದು ಆಕರ್ಷಿಸಲಾಗಿತ್ತು. ಬೀಜಾಡಿಯ ಸೀತಾಲಕ್ಷ್ಮೀ ಹಾಗೂ ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಯನ್ನು ಯುವಜನ ನಿರ್ವಹಣೆಯ ಮತಗಟ್ಟೆಯನ್ನಾಗಿಸಿ ಯುವ ಅಧಿಕಾರಿಗಳನ್ನೆ ನಿಯೋಜಿಸಲಾಗಿತ್ತು.

ಮಧ್ಯಾಹ್ನದವರೆಗೆ ಶೇ.49 ರಷ್ಟು ಸರಾಸರಿ ಮತದಾನವಾಗಿದ್ದರೂ, ಮತದಾರರು ಹಾಗೂ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲಿ ಹೇಳಿಕೊಳ್ಳುವ ಉತ್ಸಾಹ ಕಂಡು ಬಂದಿಲ್ಲ. ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರಿಂದ ಹಲವು ಮತಗಟ್ಟೆಗಳು ಆಕರ್ಷಣೆಯ ಕೇಂದ್ರಗಳಾಗಿದ್ದವು. ಬೆಳಿಗ್ಗೆ 10 ರಿಂದ ಮಧ್ಯಾಹ್ನದವರೆಗೂ ಮಂದಗತಿಯಲ್ಲಿ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಚುರುಕಾಗಿತ್ತು. ಬೇರೆ ಬೇರೆ ಸಮಾರಂಭಗಳಿಗೆ ತೆರಳಿದ್ದ ಮತದಾರರು ಕಾರ್ಯಕ್ರಮ ಮುಗಿಸಿಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದರು.


Spread the love

Leave a Reply