ಲೋಕಾಯುಕ್ತದಿಂದ ಸಾರ್ವಜನಿಕ ಸಭೆ: ನ್ಯಾ. ವಿಶ್ವನಾಥ ಶೆಟ್ಟಿ

Spread the love

ಲೋಕಾಯುಕ್ತದಿಂದ ಸಾರ್ವಜನಿಕ ಸಭೆ: ನ್ಯಾ. ವಿಶ್ವನಾಥ ಶೆಟ್ಟಿ

ಮ0ಗಳೂರು : ಸರಕಾರದ ಸೇವೆಗಳಲ್ಲಿ ವಿಳಂಭ ಸೇರಿದಂತೆ ನಾಗರೀಕರಿಗೆ ಪಾರದರ್ಶಕವಾಗಿ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಮತ್ತು ದೂರುಗಳನ್ನು ಆಲಿಸಲು ಲೋಕಾಯುಕ್ತ ಸಂಸ್ಥೆಯಿಂದ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಡಳಿತದಲ್ಲಿ ಪಾರದರ್ಶಕತೆ ಅತಿ ಪ್ರಾಮುಖ್ಯವಾಗಿದೆ. ಸರಕಾರಿ ಯೋಜನೆಗಳು ನಾಗರೀಕರಿಗೆ ವೇಗವಾಗಿ ತಲುಪುವುದಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಜನರ ಒಳಿತಿಗಾಗಿ ನಾವು ಕೆಲಸ ನಿರ್ವಹಿಸುತ್ತಿದ್ದೇವೆ ಎಂಬ ಮನೋಭಾವನೆ ಅಧಿಕಾರಿಗಳಲ್ಲಿ ಬರಬೇಕಿದೆ. ಈ ನಿಟ್ಟಿನಲ್ಲಿ ತನ್ನ ಅಧಿಕಾರಾವಧಿಯಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಪ್ರಯತ್ನ ಪಡುವುದಾಗಿ ನ್ಯಾಯಮೂರ್ತಿಗಳು ಹೇಳಿದರು.

ಲೋಕಾಯುಕ್ತ ಸಂಸ್ಥೆಯನ್ನು ಹೆಚ್ಚು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಸಾರ್ವಜನಿಕರ ದೂರು ಅಹವಾಲಿಸಲು ಮತ್ತು ಸರಕಾರಿ ಕಚೇರಿಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹಾಗೂ ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸರಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಎಸಿಬಿ ಅಥವಾ ಲೋಕಾಯುಕ್ತ ಸಂಸ್ಥೆಗಳ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದು ನ್ಯಾ. ವಿಶ್ವನಾಥ ಶೆಟ್ಟಿ ತಿಳಿಸಿದರು.

ಸರಕಾರಿ ಆಸ್ಪತ್ರೆ, ಶಾಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗನವಾಡಿ. ವಿದ್ಯಾರ್ಥಿ ನಿಲಯ ಮತ್ತಿತರ ಸೌಲಭ್ಯಗಳು ಸಮಾಜದಲ್ಲಿ ಬಡವರ ಸೇವೆಗೆ ಇರುವಂತಹ ಸಂಸ್ಥೆಗಳಾಗಿವೆ. ಇಂತಹ ಸಂಸ್ಥೆಗಳ ನಿರ್ವಹಣೆ ಹಾಗೂ ನೀಡುವ ಸೇವೆಗಳಲ್ಲಿ ಏನೇ ಲೋಪದೋಷ ಕಂಡುಬಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರಿ ಹಾಸ್ಟೆಲ್‍ಗಳಲ್ಲಿ ಆಹಾರದ ಗುಣಮಟ್ಟದ ಮೇಲೆ ನಿಗಾ ಇಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ಆದ್ಯತೆಯಲ್ಲಿ ಭರ್ತಿಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಹಾಗೂ ವಸತಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಇರುವ ಬಗ್ಗೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಅವರು ನರೇಗಾ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಸ್ವಚ್ಛ ಭಾರತ ಆಂದೋಲನ, ವಸತಿ ಮತ್ತಿತರ ಯೋಜನೆಗಳ ಅನುಷ್ಠಾನದ ಬಗ್ಗೆ ನ್ಯಾಯಮೂರ್ತಿಗಳಿಗೆ ಸಮಗ್ರ ವಿವಿರ ನೀಡಿದರು. ಅದೇ ರೀತಿ ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್‍ಲಾಕ್ ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳು ಆಯಾ ಇಲಾಖೆಯ ಕಾರ್ಯಕ್ರಮಗಳ ವಿವರ, ಅನುಷ್ಠಾನ ಮತ್ತು ಪ್ರಗತಿಯ ಮಾಹಿತಿಯನ್ನು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ನೀಡಿದರು.

ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ತಳಹಂತದವರೆಗೂ ಸಮಗ್ರ ನಿಗಾ ಇರಿಸಬೇಕು. ಸಾರ್ವಜನಿಕರಿಗೆ ಸರಕಾರಿ ಸೇವೆ ನೀಡುವಲ್ಲಿ ವಿಳಂಭ ಮಾಡುವುದೂ ಭ್ರಷ್ಟಚಾರಕ್ಕೆ ಸಮವಾಗಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಸೇವೆ ನೀಡಲು ಎಲ್ಲಾ ಇಲಾಖಾಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಭೊರಸೆ, ಡಿಸಿಪಿ ಶಾಂತರಾಜು, ಎಸಿಬಿ ಎಸ್‍ಪಿ ಚೆನ್ನಬಸವಣ್ಣ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು.


Spread the love