ವಲಸೆ ಕಾರ್ಮಿಕನ ಗುಂಪು ಹತ್ಯೆ ಪ್ರಕರಣ: ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಅಮಾನತಿಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಗ್ರಹ
ಮಂಗಳೂರು: ವಾಮಂಜೂರು ಸಮೀಪದ ಕುಡುಪು ಎಂಬಲ್ಲಿ ಮೊನ್ನೆ ನಡೆದ ವಲಸೆ ಕಾರ್ಮಿಕನ ಗುಂಪು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ರನ್ನು ಅಮಾನತುಗೊಳಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಡುಹಗಲೇ ಗುಂಪೊಂದು ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆಗೈದಿದೆ. ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಪ್ರಕರಣವು ಇದೀಗ ದ.ಕ. ಜಿಲ್ಲೆಯಲ್ಲೂ ನಡೆದಿರುವುದು ಖಂಡನೀಯ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ತಾಳಿದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸ್ಪಷ್ಟ ಮಾಹಿತಿ ನೀಡಿಲ್ಲ. ಘಟನೆ ನಡೆದ ತಕ್ಷಣ ಪೊಲೀಸರು ನಿಪ್ಷಕ್ಷಪಾತದಿಂದ ಕೆಲಸ ಮಾಡಬೇಕಿತ್ತು. ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕಿತ್ತು. ಘಟನೆ ನಡೆದ 48 ಗಂಟೆಯ ಬಳಿಕ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆದರೆ ಅದೂ ಕೂಡ ಅಪೂರ್ಣವಾಗಿತ್ತು. ಯಾಕೆ ಹೀಗೆ? ಇದರ ಹಿಂದೆ ಯಾರಿದ್ದಾರೆ ? ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಕೆ.ಕೆ.ಶಾಹುಲ್ ಹಮೀದ್ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೆಲವು ಮಂದಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ. ಇದರಿಂದ ಪ್ರೇರಿತಗೊಂಡ ಗುಂಪು ವಲಸೆ ಕಾರ್ಮಿಕನನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಇದರ ಹಿಂದೆ ಮಾಜಿ ಕಾರ್ಪೊರೇಟರ್‌ವೊಬ್ಬರ ಪತಿಯ ಕೈವಾಡವೂ ಇದೆ. ಸೂಕ್ಷ್ಮ ವಿಚಾರಗಳಿಗೆ ತಕ್ಷಣ ಹೇಳಿಕೆ ನೀಡುತ್ತಿರುವ ಶಾಸಕರಾದ ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಮೌನ ತಾಳಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಳ್ತಂಗಡಿಯ ಪೆರಾಡಿಯಲ್ಲಿ ಇಸ್ಲಾಂ ಧರ್ಮವನ್ನು ಅವಹೇಳನಾರಿಯಾಗಿ ಚಿತ್ರಿಸಿದ ಘಟನೆಯ ಬಗ್ಗೆ ಪೊಲೀಸರು 30 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ. ಕೇವಲ 6 ಮಂದಿಯನ್ನು ಠಾಣೆಗೆ ಕರೆಸಿ ಜಾಮೀನು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪೊಲೀಸರು ಇಂತಹ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ ಕಾರಣ ಹೀಗೆಲ್ಲ ಆಗುತ್ತಿದೆ. ಪ್ರಮೋಚದನಕಾರಿ ಭಾಷಣ ಮತ್ತು ಅವಹೇಳನಕಾರಿ ಘಟನೆಗಳಿಗೆ ಕಡಿವಾಣ ಹಾಕದಿದ್ದರೆ ಜಿಲ್ಲೆಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಬ ಹುದು ಎಂದು ಶಾಹುಲ್ ಹಮೀದ್ ಅಭಿಪ್ರಾಯಪಟ್ಟರು.
ಘಟನೆಯ ಬಗ್ಗೆ ರಾಜ್ಯದ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಹೇಳಿಕೆಗಳ ಅಸಮಾಧಾನ ವ್ಯಕ್ತಪಡಿಸಿದ ಶಾಹುಲ್ ಹಮೀದ್ ತಕ್ಷಣ ಅವರು ಜಿಲ್ಲೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ನಗರ ಮತ್ತು ಗ್ರಾಮಾಂತರ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ವೈಫಲ್ಯವು ಎದ್ದು ಕಾಣುತ್ತಿವೆ. ಕುಡುಪುವಿನ ಕ್ರಿಕೆಟ್ ಮೈದಾನದಲ್ಲಿ ವಲಸೆ ಕಾರ್ಮಿಕನನ್ನು ಗುಂಪು ಹತ್ಯೆ ಮಾಡಿ ರಸ್ತೆಗೆ ಎಸೆದಿರುವ ಬಗ್ಗೆ ಸ್ಥಳೀಯರನ್ನು ವಿಚಾರಿಸಿದರೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಸಿಗಬಹುದು. ಆದರೆ ಪೊಲೀಸರು ಆ ಕೆಲಸವನ್ನು ಮಾಡಿಲ್ಲ. ವಲಸೆ ಕಾರ್ಮಿಕನ ಮೇಲೆ ಗಾಯವಿಲ್ಲ ಎಂದು ಪೊಲೀಸ್ ಆಯುಕ್ತರು ಯಾವ ಆಧಾರದಲ್ಲಿ ಹೇಳಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ನಾವು ವೆನ್ಲಾಕ್ ಶವಾಗಾರಕ್ಕೆ ತೆರಳಿ ಮೃತದೇಹವನ್ನು ಪರಿಶೀಲಿಸಿದಾಗ ಆತನ ಮೈಮೇಲೆ ತುಂಬಾ ಗಾಯಗಳು ಕಂಡುಬಂದಿವೆ. ಪೊಲೀಸ್ ಆಯುಕ್ತರು ಹೊರಡಿಸಿದ ಲುಕ್‌ಔಟ್ ನೋಟಿಸ್‌ನಲ್ಲೂ ಕೂಡ ಸಾಕಷ್ಟು ಗೊಂದಲವಿದೆ. ಅವರ ಮಾತುಗಳೆಲ್ಲವೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ ಎಂದು ಶಾಹುಲ್ ಹಮೀದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಲಾರೆನ್ಸ್ ಡಿಸೋಜ, ಸುಹೈಲ್ ಕಂದಕ್, ಆಲ್ವಿನ್ ಪ್ರಕಾಶ್, ಮುಹಮ್ಮದ್ ಬಪ್ಪಳಿಗೆ, ಹಬೀಬ್ ಕಣ್ಣೂರು, ವಹಾಬ್ ಕುದ್ರೋಳಿ, ಬಶೀರ್ ಉಪಸ್ಥಿತರಿದ್ದರು.