ವಿಜಯಪುರ | ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ; ಹೊರ ರಾಜ್ಯದ ನಾಲ್ವರ ಬಂಧನ
ವಿಜಯಪುರ : ಚಡಚಣ ಪಟ್ಟಣದ ಎಸ್ಬಿಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾದ ಮಹಾರಾಷ್ಟ್ರ-ಬಿಹಾರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಡಿಜಿಪಿ (ಕಾ.ಸು) ಆರ್.ಹಿತೇಂದ್ರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಬೇಧಿಸುವಲ್ಲಿ ವಿಜಯಪುರ ಪೊಲೀಸರು ಉತ್ತಮ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಾದ ಬಿಹಾರದ ಸಮಸ್ತಿಪುರ ನಿವಾಸಿಗಳಾದ ರಾಕೇಶ ಕುಮಾರ ಶಿವಾಜಿ ಸಹಾನಿ (22), ರಾಜಕುಮಾರ ರಾಮಲಾಲ್ ಪಾಸ್ವಾನ (21) ಹಾಗೂ ರಕ್ಷಕುಮಾರ ಮದನ ಮಾತೋ (21) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಮೂಲದ ಆರೋಪಿಯ ಹೆಸರು ಪೊಲೀಸರು ತನಿಖೆಯ ದೃಷ್ಟಿಯಿಂದ ಆತನ ಹೆಸರು ಬಹಿರಂಗೊಳಿಸಲು ಆಗದು ಎಂದರು.
ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಟ್ಟಾರೆಯಾಗಿ 9.01 ಕೆಜಿ ಬಂಗಾರ ಹಾಗೂ 86,31,22 ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಉಳಿದ ಚಿನ್ನಾಭರಣ, ನಗದು ಹಣವನ್ನು ಅಧಿಕಾರಿಗಳು ಶೀಘ್ರವೇ ಪತ್ತೆ ಹಚ್ಚಲಿದ್ದಾರೆ ಎಂದರು.
ಕಳೆದ ಸೆಪ್ಟೆಂಬರ್ 16 ರಂದು ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ ನಡೆದಿತ್ತು. ಪ್ರಕರಣದಲ್ಲಿ 20 ಕೆ.ಜಿ ಚಿನ್ನಾಭರಣ ಹಾಗೂ 1 ಕೋಟಿ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು ಎಂದರು.
ಆರೋಪಿತರು ಕೃತ್ಯ ಎಸಗಿ ಪರಾರಿಯಾಗಲು ಬಳಸಿದ್ದ ಮಾರುತಿ ಈಕೋ ಕಾರು, ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿತ್ತು. ಅಲ್ಲಿ ಸಾರ್ವಜನಿಕರು ಸೇರಿ ಸುತ್ತುವರೆಯುತ್ತಿದ್ದಂತೆ ಕಾರಿನ ಚಾಲಕನು ಪಿಸ್ತೂಲ್ ತೋರಿಸಿ, ಸಾರ್ವಜನಿಕರನ್ನು ಬೆದರಿಸಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ, ಈ ಸುಳಿವು ಆಧರಿಸಿ ತನಿಖಾ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದ 888.33 ಗ್ರಾಂ ಚಿನ್ನದ ಆಭರಣಗಳಿದ್ದ 21 ಪ್ಯಾಕೇಟ್ ಹಾಗೂ 1,03,160 ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಆರೋಪಿಗಳು ಹುಲಜಂತಿ ಗ್ರಾಮದ ಒಂದು ಪಾಳುಬಿದ್ದ ಮನೆಯ ಮೇಲ್ಛಾವಣಿಯ ಮೇಲೆ ಒಂದು ಬ್ಯಾಗನ್ನು ಎಸೆದು ಹೋಗಿದ್ದು ಅದರಲ್ಲಿ 6.54 ಕೆಜಿ ಚಿನ್ನಾಭರಣಗಳು ಹಾಗೂ 41,03,000 ರೂ. ನಗದು ಸಹ ಪತ್ತೆಯಾಗಿತ್ತು, ಕಾರಿನಲ್ಲಿದ್ದ ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಹುಲಜಂತಿಯ 15 ಜನರಿಂದ 1.587 ಕೆ.ಜಿ ಬಂಗಾರ ಹಾಗೂ 44,25,060 ರೂ. ನಗದು ಹಣ ಜಪ್ತಿ ಮಾಡಲಾಗಿದೆ ಎಂದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಎಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಜಗದೀಶ ಎಚ್.ಎಸ್., ಸುನೀಲ ಕಾಂಬಳೆ, ಅಧಿಕಾರಿಗಳಾದ ಸುರೇಶ ಬೆಂಡೆ ಗುಂಬಳ, ಎಂ.ಎಂ. ಡಪ್ಪಿನ್, ರಮೇಶ ಅವಜಿ, ರಾಕೇಶ ಬಗಲಿ, ಶ್ರೀಕಾಂತ ಕಾಂಬ್ಳೆ, ಮನಗೂಳಿ, ಎನ್.ಜಿ. ಅಪನಾಯ್ಕರ, ಸೋಮೇಶ ಗೆಜ್ಜಿ, ಮಂಜುನಾಥ ತಿರಕನ್ನವರ, ಅರವಿಂದ ಅಂಗಡಿ, ದೇವರಾಜ ಉಳಾಗಡ್ಡಿ ಒಳಗೊಂಡ 7 ವಿಶೇಷ ತನಿಖಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಎಡಿಜಿಪಿ ಹಿತೇಂದ್ರ ಅವರು ಶ್ಲಾಘಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಇದ್ದರು.