ವೃದ್ಧೆಯ ಮನೆಗೆ ನುಗ್ಗಿ ದರೋಡೆ: ₹4.43 ಲಕ್ಷ ಮೌಲ್ಯದ ಚಿನ್ನ ವಶ, ಮೂವರು ಆರೋಪಿಗಳ ಬಂಧನ
ಮಂಗಳೂರು: ಕುಡಿಯಲು ನೀರು ಬೇಕೆಂದು ನೆಪವಿಟ್ಟು ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ₹4.43 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಸುರತ್ಕಲ್ ಮುಕ್ಕ, ಸಸಿಹಿತ್ಲು ರಸ್ತೆಯ ಮಿತ್ರ ಪಟ್ಟಣದ ಜಯಲಕ್ಷ್ಮೀ ನಿವಾಸದಲ್ಲಿ ವಾಸವಾಗಿರುವ ದಿ. ಜಿನ್ನಪ್ಪ ಸುವರ್ಣ ಅವರ ಪತ್ನಿ ಶ್ರೀಮತಿ ಜಲಜ (85) ಅವರು ನೀಡಿದ ದೂರಿನ ಪ್ರಕಾರ, ಡಿಸೆಂಬರ್ 3ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಅಪರಿಚಿತರು ಮನೆ ಬಾಗಿಲು ತಟ್ಟಿ ಕುಡಿಯಲು ನೀರು ಕೇಳಿದ್ದಾರೆ. ಬಾಗಿಲು ತೆರೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ, ತುಳುವಿನಲ್ಲಿ ಚಿನ್ನ ಎಲ್ಲಿದೆ ಎಂದು ಬೆದರಿಸಿ, ಬಾಯಿರಾಸನ್ನು ಕುತ್ತಿಗೆಗೆ ಬಿಗಿದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿತರು ಗೋದ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ ಹಾಗೂ ಪರ್ಸ್‌ನಲ್ಲಿದ್ದ ಸುಮಾರು ₹14,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 158/2025, ಕಲಂ 309(6) ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಠಾಣಾ ಪಿಎಸ್‌ಐ ರಘುನಾಯಕ್, ರಾಘವೇಂದ್ರ ನಾಯಕ್ ಮತ್ತು ಸಿಬ್ಬಂದಿಗಳ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಅಲಿಯಾಸ್ ಶೈನ್ (21), ಸುರತ್ಕಲ್ ನಿವಾಸಿಯನ್ನು ವಶಕ್ಕೆ ಪಡೆದುಕೊಂಡಿದೆ. ವಿಚಾರಣೆಯಲ್ಲಿ ಆತನು ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಜೊತೆಗೆ ಕೃತ್ಯ ನಡೆಸಿರುವುದಾಗಿ ಹಾಗೂ ಕಳುವಾದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಮಾಹಿತಿ ಆಧರಿಸಿ ಪೊಲೀಸರು ಬೆಂಗಳೂರಿಗೆ ತೆರಳಿ ವಿನೋದ್ ಅಲಿಯಾಸ್ ಕೋತಿ ಅಲಿಯಾಸ್ ವಿನೋದ್ ಕುಮಾರ್ (33) ಮತ್ತು ಗಿರೀಶ್ ಅಲಿಯಾಸ್ ಸೈಕಲ್ ಗಿರಿ (28) ಎಂಬವರನ್ನು ಡಿಸೆಂಬರ್ 14ರಂದು ಬಂಧಿಸಿದ್ದಾರೆ. ಆರೋಪಿಗಳಿಂದ ₹4.43 ಲಕ್ಷ ಮೌಲ್ಯದ ಕಳುವಾದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ ಮೋಟಾರ್‌ಸೈಕಲ್, ಮೂರು ಮೊಬೈಲ್‌ಫೋನ್‌ಗಳು ಹಾಗೂ ₹3,000 ನಗದನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ.
ಇನ್ನೊಬ್ಬ ಆರೋಪಿ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಡಿಸೆಂಬರ್ 15ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಪಿಎಸ್‌ಐ ರಘುನಾಯಕ್, ರಾಘವೇಂದ್ರ ನಾಯಕ್ ಸೇರಿದಂತೆ ಠಾಣಾ ಸಿಬ್ಬಂದಿಗಳ ಸಹಕಾರದಿಂದ ನಡೆಯಿತು.













