ವೈದ್ಯರ ಮೇಲೆ ಹಲ್ಲೆ: ಡಾ ವಿ ಎಸ್ ಆಚಾರ್ಯ ರೂಪಿಸಿದ್ದ ಕಾನೂನಿನ ಅನುಷ್ಠಾನಕ್ಕೆ ಕಾರ್ಣಿಕ್ ಆಗ್ರಹ

Spread the love

ವೈದ್ಯರ ಮೇಲೆ ಹಲ್ಲೆ: ಡಾ ವಿ ಎಸ್ ಆಚಾರ್ಯ ರೂಪಿಸಿದ್ದ ಕಾನೂನಿನ ಅನುಷ್ಠಾನಕ್ಕೆ ಕಾರ್ಣಿಕ್ ಆಗ್ರಹ

ಮಂಗಳೂರು: ಚಿಕಿತ್ಸೆ ಫಲಕಾರಿಯಾಗದೆ 65 ವರ್ಷ ಪ್ರಾಯದ ವ್ಯಕ್ತಿಯೋರ್ವರು ಅಸುನೀಗಿದ ಘಟನೆಯನ್ನು ಮುಂದಿಟ್ಟುಕೊಂಡು ದೇರಳಕಟ್ಟೆಯ ಆಸ್ಪತ್ರೆಯ ವೈದ್ಯರಾದ ಡಾ. ಅಭಿಜಿತ್ ಶೆಟ್ಟಿ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗಳ ಮೇಲೆ ರೋಗಿಯ ಸಂಬಂಧಿಗಳು ಹಲ್ಲೆ ನಡೆಸಿ ಪೀಠೋಪಕರಣ ದ್ವಂಸಮಾಡಿದಲ್ಲದೆ ವೈದ್ಯರನ್ನು ಅಪಹರಣ ಮಾಡಿ ಕೊಲೆ ಯತ್ನದಂತಹ ರಾಕ್ಷಸ ಪ್ರವೃತ್ತಿ ತೋರಿರುವುದನ್ನು ಕರ್ನಾಟಕ ವಿಧಾನ ಪರಿಷತ್
ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ನಡೆಸಿದ ಪ್ರತಿಭಟನೆಗೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಾ, ಅಪಘಾತ, ಅನಾರೋಗ್ಯ ಮುಂತಾದ ತುರ್ತು ಸಂದರ್ಭಗಳಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯಪ್ರವೃತ್ತರಾಗುವ ವೈದ್ಯರ ಸೇವೆಯನ್ನು ಗುರುತಿಸದೆ ಅವರ ಮೇಲೆಯೇ ಹಲ್ಲೆ ನಡೆಸುವ ಘಟನೆ ನಡೆದಿರುವುದು ದುರಾದೃಷ್ಟಕರ.

ಡಾ. ವಿ.ಎಸ್. ಆಚಾರ್ಯರವರು ಸಚಿವರಾಗಿದ್ದ ಸಂದರ್ಭದಲ್ಲಿ ರೂಪಿಸಿದ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು ರಹಿತ ಬಂಧನ ವಿಧಿಸುವ ಕಠಿಣ ಕಾನೂನನ್ನು ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇಂತಹ ಗುಂಡಾ ಪ್ರವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ತುರ್ತು ಸಂದರ್ಭಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲೂ ಯೋಚಿಸಬೇಕಾದ ಪರಿಸ್ಥಿತಿ ಒದಗಿಬರಬಹುದು. ವೈದ್ಯರ ಮೇಲೆ ನಡೆದ ಹಲ್ಲೆಯ ಪ್ರಕರಣಗಳನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಂಡು ಇಂತಹ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love