ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ’ಸೋಜಾ ನಿಧನ

Spread the love

ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ’ಸೋಜಾ ನಿಧನ

ಮಂಗಳೂರು: ಮಂಗಳೂರು ಕ್ಯಾಥೊಲಿಕ್‌ ಕ್ರೈಸ್ತ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಶತಾಯುಷಿ ವಂದನೀಯ ಫಾ. ಅಲೋಶಿಯಸ್ ಡಿ’ಸೋಜಾ ಅವರು ಆಗಸ್ಟ್ 7 ರಂದು ಜಪ್ಪು ಸೈಂಟ್‌ ಜೋಸೆಫ್‌ ವಾಜ್ ಹೋಂನಲ್ಲಿ ನಿಧನ ಹೊಂದಿದರು. ಅವರಿಗೆ 100 ವರ್ಷ ಮತ್ತು 7 ತಿಂಗಳ ಪ್ರಾಯವಾಗಿತ್ತು.

ಅವರ ಅಂತ್ಯಕ್ರಿಯೆಯ ಬಲಿಪೂಜೆ ಮತ್ತು ಅಂತ್ಯಕ್ರಿಯೆಯ ವಿಧಿಗಳು ಆಗಸ್ಟ್ 8 ರಂದು ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್‌ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.

1953 ಆಗಸ್ಟ್ 24 ರಂದು ಗುರು ದೀಕ್ಷೆ ಪಡೆದಿದ್ದ ಅಲೋಶಿಯಸ್ ಡಿ’ಸೋಜಾ ಅವರು ಸುದೀರ್ಘ 72 ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2025 ಜನವರಿ 29 ರಂದು ಜನ್ಮ ಶತಮಾನೋತ್ಸವ ಆಚರಿಸಿದ್ದರು. ಅವರು ಮಂಗಳೂರು ಧರ್ಮಪ್ರಾಂತ್ಯದಲ್ಲಿ 100 ವರ್ಷ ಕಾಲ ಬದುಕಿ ಬಾಳಿದ ಮೊದಲ ಧರ್ಮಗುರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಆ ಪ್ರಯುಕ್ತ ನಿವೃತ್ತಿಯ ಬಳಿಕವೂ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಜಪ್ಪು ಸೈಂಟ್‌ ಜೋಸೆಫ್ ಸೆಮಿನರಿಯಲ್ಲಿ ಇತ್ತೀಚೆಗೆ ಸಂಭ್ರಮದ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಿದ್ದರು. 100 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಪೋಪ್ ಫ್ರಾನ್ಸಿಸ್ ವಿಶೇಷ ಆಶೀರ್ವಾದವನ್ನು ನೀಡಿದ್ದರು.

1925 ಜನವರಿ 29 ರಂದು ಪುತ್ತೂರಿನಲ್ಲಿ ಜನಿಸಿದ್ದ ಅವರು ಗುರು ದೀಕ್ಷೆಯ ಬಳಿಕ ಮಂಗಳೂರಿನ ಬಿಜೈ ಚರ್ಚ್ ನಲ್ಲಿ ಸಹಾಯಕ ಗುರುಗಳಾಗಿ, ಅರ್ವಾದಲ್ಲಿ ಮಿಷನರಿ ಗುರುಗಳಾಗಿ ಬಳಿಕ ಬಿಷಪ್ ಕಾರ್ಯದರ್ಶಿಯಾಗಿ, ಕೋಡಿಯಾಲ್‌ಬೈಲ್ ಪ್ರೆಸ್‌ನ ನಿರ್ದೇಶಕ ಮತ್ತು ವ್ಯವಸ್ಥಾಪಕರಾಗಿ, ಪೆಜಾರ್ ಮತ್ತು ಕಿನ್ನಿಗೋಳಿಯಲ್ಲಿ ಧರ್ಮಗುರುಗಳಾಗಿ, 19871995 ಅವಧಿಯಲ್ಲಿ ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಆಗಿದ್ದು, ಬಳಿಕ ಜಪ್ಪು ಸೈಂಟ್‌ ಆ್ಯಂಟನಿ ಆಶ್ರಮದ ನಿರ್ದೇಶಕರಾಗಿ, ಜಪ್ಪು ಸೈಂಟ್‌ ಜೋಸೆಫ್ ಸೆಮಿನರಿಯಲ್ಲಿ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕೊನೆಯ ವರ್ಷಗಳನ್ನು ಜಪ್ಪುವಿನ ಜೋಸೆಫ್‌ ವಾಜ್ ಹೋಂ ನಲ್ಲಿ ಕಳೆದಿದ್ದರು.

ಧರ್ಮ ಪ್ರಾಂತ್ಯದ ಆರು ಮಂದಿ ಬಿಷಪ್‌ಗಳ ಅಧೀನದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಭಾಷಾ ಪ್ರವೀಣರಾಗಿದ್ದ ಅವರು ಲ್ಯಾಟಿನ್ ಮತ್ತು ಇಂಗ್ಲಿಷ್‌ ಶಿಕ್ಷಕರಾಗಿದ್ದರು. ತಮ್ಮ ಜ್ಞಾನ, ವಿವೇಕ, ಬುದ್ಧಿವಂತಿಕೆ, ನಮ್ರತೆ ಮತ್ತು ಪೌರೋಹಿತ್ಯ ಸೇವೆಯಲ್ಲಿನ ಸಂತಸವು ಅವರ ವಿದ್ಯಾರ್ಥಿಗಳು ಮತ್ತು ವಿಶ್ವಾಸಿಗಳಲ್ಲಿ ಅಚ್ಚಳಿಯದ ಪ್ರಭಾವ ಬೀರಿದೆ.

ಅವರ ನಿಧನಕ್ಕೆ ಮಂಗಳೂರು ಧರ್ಮ ಪ್ರಾಂತ್ಯವು ಶೋಕ ವ್ಯಕ್ತಪಡಿಸುವುದರ ಜತೆಗೆ ಅವರ ಜೀವನ ಮತ್ತು ಪೌರೋಹಿತ್ಯ ಸೇವೆಯ ಮೂಲಕ ಸುರಿಸಿದ ಹೇರಳವಾದ ಆಶೀರ್ವಾದಗಳಿಗಾಗಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿದೆ.


Spread the love
Subscribe
Notify of

0 Comments
Inline Feedbacks
View all comments