ಶಾಲಾ ಮಕ್ಕಳ ವಾಹನಗಳು ಕಡ್ಡಾಯವಾಗಿ ನಿಯಮ ಪಾಲಿಸಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಶಾಲಾ ಮಕ್ಕಳ ವಾಹನಗಳು ಕಡ್ಡಾಯವಾಗಿ ನಿಯಮ ಪಾಲಿಸಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ : ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಮಾಲೀಕರು, ಚಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು, ಮಕ್ಕಳ ಸುರಕ್ಷಿತ ಸಾಗಾಣಿಕೆಗಾಗಿ ಸರ್ಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಎಲ್ಲಾ ವಾಹನಗಳು ವಾಹನದ ವಿಮಾ ಪಾಲಿಸಿ, ವಾಹನ ಫಿಟ್ ನೆಸ್, ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ದ್ವಾರ ಸೇರಿದಂತೆ , ಅಪಘಾತ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂದಿಸಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರಬೇಕು, ವಾಹನಗಳಿಗೆ ಹಳದಿ ಬಣ್ಣ ಮತ್ತು ನಾಲ್ಕು ಕಡೆಗಳಲ್ಲಿ ಶಾಲಾ ವಾಹನ ಎಂದು ಸ್ಪಷ್ಟವಾಗಿ ನಮೂದಿಸಿರಬೇಕು, ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಿರಬೇಕು ಹಾಗೂ ವಾಹನಗಳನ್ನು ಸುಸ್ಥಿತಿಯಿಲ್ಲಿಟ್ಟುಕೊಂಡು ನಿಗಧಿತ ಸಂಖ್ಯೆಯ ಮಕ್ಕಳನ್ನು ಮಾತ್ರ ಕರೆದೊಯ್ಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ವಾಹನಗಳ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತಂತೆ ತರಬೇತಿ ನೀಡುವಂತೆ ಮತ್ತು ಸೂಕ್ತ ಚಾಲನಾ ಪರವಾನಗಿ ಇರುವ ಕುರಿತಂತೆ ಹಾಗೂ ವಾಹನ ಚಾಲಕರ ನೇಮಕ ಸಂದರ್ಭದಲ್ಲಿ ಚಾಲಕನ ಹಿನ್ನಲೆಯನ್ನು ಸಂಬಂದಿಸಿದ ಸಂಸ್ಥೆಗಳು ಕಡ್ಡಾಯವಾಗಿ ಪರಿಶೀಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ಮಕ್ಕಳ ಶಾಲಾ ವಾಹನದ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತಂತೆ ಪುರ್ನಮನನ ತರಬೇತಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದ ಸಮಯದಲ್ಲಿ ವಾಹನಗಳ ಚಾಲಕರು ಪರಸ್ಪರ ಪೈಪೋಟಿಗೆ ಬೀಳದೆ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಮತ್ತು ಮನೆಗೆ ತಲುಪಿಸಬೇಕು, ಶಾಲಾ ವಾಹನದಲ್ಲಿ ಪ್ರಯಾಣಿಸುವ ಮಕ್ಕಳ ವಿಳಾಸ, ತುರ್ತು ಸಂಪರ್ಕಿಸಲು ಅನುಕೂಲವಾಗುವಂತಹ ಮಕ್ಕಳ ವಿಳಾಸ, ದೂರವಾಣಿ ಸಂಖ್ಯೆಗಳ ವಿವರಗಳನ್ನು ಶಾಲೆಗಳು ಹೊಂದಿರಬೇಕು, ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ನಿಗಧಿತ ಸಮಯಕ್ಕೆ ತಲುಪಲು ಕೆಲವೊಮ್ಮೆ ಅಸಾಧ್ಯವಾಗಲಿದ್ದು, ಈ ಕುರಿತಂತೆ ಮಕ್ಕಳು ಹಾಗೂ ಚಾಲಕರಿಗೆ ಒತ್ತಡ ಹಾಕದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಶಾಲೆಗಳು ಇರುವ ಕಡೆಗಳಲ್ಲಿ ಮತ್ತು ಶಾಲಾ ಮಕ್ಕಳ ಸಂಚರಿಸುವ ಪ್ರದೇಶದಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಹೆದ್ದಾರಿಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ರಾಂಗ್‍ಸೈಡ್ ನಲ್ಲಿ ವಾಹನ ಚಲಾಯಿಸುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಗಸ್ತು ಪೊಲೀಸರಿಗೆ ಸೂಚಿಸಿದರು.

ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಿ, ಸಭೆಯಲ್ಲಿ ಪೋಷಕರು , ವಾಹನ ಚಾಲಕರಿಗೆ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಮತ್ತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳು , ಪೋಕ್ಸೋ ಕಾಯಿದೆ ಅನುಷ್ಠಾನದ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿ, ಶಾಲೆಗಳಿಗೆ ಗ್ರೇಡಿಂಗ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳು ಶಾಲೆಗೆ ಬರುವ ದಾರಿಯಲ್ಲಿನ ಅಪಾಯಕಾರಿ ಕಲ್ಲು ಕ್ವಾರಿಗಳು, ಗುಂಡಿಗಳು, ಮುಂತಾದ ಸ್ಥಳಗಳ ಕುರಿತು ಮಕ್ಕಳಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ , ಇಂತಹ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಕಲ್ಪಿಸಲಾಗುವುದು, ಕಲ್ಲು ಕ್ವಾರಿಗಳ ಮಾಲೀಕರಿಗೆ ಸೂಕ್ತ ತಡೆಗೋಡೆ ನಿರ್ಮಿಸುವಂತೆ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ, ಡಿಡಿಪಿಐ ದಿವಾಕರ ಶೆಟ್ಟಿ ಹಾಗೂ ವಿವಿಧ ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love