ಸಂಪುಟ ಪುನರ್ ರಚನೆ ಕುರಿತು ಯಾವುದೇ ನಿರ್ಧಾರ ಆಗಿಲ್ಲ – ದಿನೇಶ್ ಗುಂಡೂರಾವ್
ಮಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ರಚನೆ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಚಿವ ಸಂಪುಟ ಪುನರ್ರಚನೆ ಬಗ್ಗೆ ನಾವು ಕೇಳುತ್ತಿರುವುದೆಲ್ಲ ಮಾಧ್ಯಮದ ವರದಿಗಳಿಂದಷ್ಟೇ. ನಿಜವಾಗಿ ನಮಗೆ ಅದರ ಕುರಿತು ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ಯಾರಿಗೂ ಸ್ಪಷ್ಟವಾದ ತಿಳಿವಳಿಕೆ ಇಲ್ಲ,” ಎಂದು ಹೇಳಿದರು.
“ಪುನರ್ರಚನೆ ಯಾವಾಗ ಬೇಕಾದರೂ ಆಗಬಹುದು, ಅದು ಮುಖ್ಯಮಂತ್ರಿಯವರ ನಿರ್ಧಾರ. ಆದರೆ, ಪ್ರಸ್ತುತ ಅದರ ಬಗ್ಗೆ ಯಾವುದೇ ಅಧಿಕೃತ ಚರ್ಚೆ ಅಥವಾ ನಿರ್ಧಾರ ನಡೆದಿಲ್ಲ,” ಎಂದು ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿಗಳು ಸೋಮವಾರ ಔತಣಕೂಟಕ್ಕೆ ಆಹ್ವಾನ ನೀಡಿರುವುದಾಗಿ ತಿಳಿಸಿ, “ಸಿ.ಎಂ. ಅವರು ಕರೆದಿದ್ದಾರೆ, ಅಲ್ಲಿ ಬೇರೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಬಹುದು. ಆದರೆ ಅದನ್ನೇ ಸಚಿವ ಸಂಪುಟ ಪುನರ್ರಚನೆ ಎಂದು ಅರ್ಥಮಾಡಿಕೊಳ್ಳುವುದು ಸರಿಯಲ್ಲ. ಸಭೆ ನಡೆದ ನಂತರವೇ ಏನು ಚರ್ಚೆ ಆಗುತ್ತದೆ ಎಂಬುದು ಗೊತ್ತಾಗುತ್ತದೆ,” ಎಂದು ಸಚಿವರು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ‘ದಲಿತ ಮುಖ್ಯಮಂತ್ರಿ’ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, “ದಲಿತ ಸಮುದಾಯದ ಕೆಲ ಸಚಿವರು ಸಭೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ ಅವರು ಯಾವಾಗಲೂ ಸೇರಿ ಚರ್ಚೆ ನಡೆಸುತ್ತಲೇ ಇರುತ್ತಾರೆ. ಅವರು ಪರಸ್ಪರ ಸ್ನೇಹಿತರು — ಹೀಗಾಗಿ ಅವರ ಸಭೆಗೆ ಬೇರೆ ಬಣ್ಣ ನೀಡುವುದು ಅಥವಾ ಕಥೆ ಕಟ್ಟುವುದು ಸರಿಯಲ್ಲ,” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಹಾಗೂ ಅತ್ಯಂತ ಜನಪ್ರಿಯ ನಾಯಕರು. ಅವರ ಬದಲಾವಣೆಯ ಬಗ್ಗೆ ಮಾತನಾಡುವುದು ಸಂಪೂರ್ಣ ಅಪ್ರಸ್ತುತ. ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟನೆ ನೀಡಿದರು.