ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ  ವತಿಯಿಂದ ಶಿಕ್ಷಣ ತಜ್ಞ ಅಶೋಕ್ ಕಾಮತ್ ಅವರಿಗೆ ವಿಶ್ವಪ್ರಭಾ ಪುರಸ್ಕಾರ 2026

Spread the love

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ  ವತಿಯಿಂದ ಶಿಕ್ಷಣ ತಜ್ಞ ಅಶೋಕ್ ಕಾಮತ್ ಅವರಿಗೆ ವಿಶ್ವಪ್ರಭಾ ಪುರಸ್ಕಾರ 2026

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ವತಿಯಿಂದ ಶ್ರೀಮತಿ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣಿೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2026 ‘ನ್ನು ಶಿಕ್ಷಣ ತಜ್ಞ ಅಶೋಕ ಕಾಮತ್ ಅವರಿಗೆ ನೀಡಿ ಪುರಸ್ಕರಿಸಲಾಗುವುದು.

ಈ ಪುರಸ್ಕಾರವು ಪ್ರಶಸ್ತಿ ಪತ್ರ , ಫಲಕ ಹಾಗೂ ಗೌರವ ಧನ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ.

ಇದೇ ಬರುವ ಜನವರಿ ತಿಂಗಳ 26ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ‘ಸಂಸ್ಕೃತಿ ಉತ್ಸವ’ ದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಚಾಲಕ ರವಿರಾಜ್ ಎಚ್. ಪಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಇದೇ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಸಂಸ್ಥೆಯ ಮಹಾಪೋಷಕರಾದ ಡಾ. ಹರೀಶ್ಚಂದ್ರ, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಗೌರವ ಸಲಹೆಗಾರರಾದ ಜನಾರ್ದನ್ ಕೊಡವವೂರ್ ಉಪಸ್ಥಿತರಿದ್ದರು.

ಡಾ. ಅಶೋಕ ಕಾಮತ್ ಪರಿಚಯ

ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಡುಪಿ

1967 ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಕೋಟದಲ್ಲಿ ಜನಿಸಿದರು. ತಂದೆ ಕೆ. ನಾರಾಯಣ ಕಾಮತ್ (ದರ್ಜಿ), ತಾಯಿ: ಶ್ರೀಮತಿ ರೋಹಿಣಿ ಕಾಮತ್ (ಗೃಹಿಣಿ).

ಮೂರನೇ ತರಗತಿವರೆಗೆ ಶಾಂಭವಿ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಅಧ್ಯಯನ ನಡೆಸಿದ ಕುಟುಂಬ ಶಿವಮೊಗ್ಗಕ್ಕೆ ವಲಸೆ ಹೋಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ರಾಷ್ಟ್ರೀಯ ಬಾಲಕರ ಪ್ರೌಢಶಾಲೆ, ಶಿವಮೊಗ್ಗ ಇಲ್ಲಿ ಎಸ್.ಎಸ್.ಎಲ್.ಸಿ. ಬಳಿಕ, ದೇಶೀಯ ವಿದ್ಯಾಶಾಲೆಯ(ಡಿ.ವಿ.ಎಸ್. ಕಾಲೇಜು) ಪದವಿಪೂರ್ವ ಶಿಕ್ಷಣ, ಸಹ್ಯಾದ್ರಿ (ಸರ್ಕಾರಿ) ಕಾಲೇಜಿನಲ್ಲಿ ವಿಜ್ಞಾನ ಪದವಿ (ಬಿ.ಎಸ್ಸಿ 1987- ಮೈಸೂರು ವಿಶ್ವವಿದ್ಯಾಲಯ). ರಾಷ್ಟ್ರೀಯ ವಿದ್ಯಾಸಂಸ್ಥೆಯಲ್ಲಿ ಬಿ.ಇಡಿ. ಪದವಿ(1988- ಮೈಸೂರು ವಿಶ್ವವಿದ್ಯಾಲಯ) ಪಡೆದಿರುತ್ತಾರೆ.

ಆಕಾಶವಾಣಿ ಭದ್ರಾವತಿ ಇಲ್ಲಿ ಹಂಗಾಮಿ ಉದ್ಘೋಷಕನಾಗಿ ಕಾರ್ಯ, ಯುವವಾಣಿಯಲ್ಲಿ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಬಿತ್ತರ.

ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟೆರಿಯಟ್ ನಲ್ಲಿ ಅಸ್ಸಾಂ, ಗುಜರಾತ್ ಮತ್ತು ದೆಹಲಿಗಳಲ್ಲಿ ಕೆಲಸ (1990 ರಿಂದ 1999). ನಂತರ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಬ್ರಹ್ಮಾವರ (1999-2003), ವಳಕಾಡು (2003-2011) ಇಂದಿರಾನಗರ (2011) ಕರ್ತವ್ಯ ನಿರ್ವಹಿಸಿದ್ದು. ಪದೋನ್ನತಿಯ ಬಳಿಕ ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿ (2011-2014), ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಇಲ್ಲಿ ಉಪನ್ಯಾಸಕ (2014-2017), ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ (2017-2020) ಹಾಗೂ ಹಿರಿಯ ಉಪನ್ಯಾಸಕರ ಡಯಟ್ ಉಡುಪಿ (2021-25) ಬಳಿಕ ಡಯಟ್ ನ ಪ್ರಾಂಶುಪಾಲರಾಗಿ ಭಡ್ತಿ (ಆಗಷ್ಟ್ 2025).ಹೆಚ್ಚುವರಿ ಪ್ರಭಾರಗಳು: ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ (2000-2004). ಸಮೂಹ ಸಹಾಯಕ ಶಿಕ್ಷಣಾಧಿಕಾರಿ, ವಳಕಾಡು (2007-09), ಕ್ಷೇತ್ರ ಶಿಕ್ಷಣಾಧಿಕಾರಿ, ಉಡುಪಿ (2022), ಶಿಕ್ಷಣಾಧಿಕಾರಿ ಅಕ್ಷರದಾಸೋಹ (2024).

ಜೀವನ ಪರ್ಯಂತ ಕಲಿಕೆಯ ತತ್ವ: ಅಸ್ಸಾಂ ನಲ್ಲಿ ಇರುವ ಸಂದರ್ಭದಲ್ಲಿ ಪಿ.ಜಿ. ಡಿಪ್ಲೊಮಾ ಇನ್ ಹೈಯರ್ ಎಜುಕೇಶನ್ ಇಗ್ನೋ ಮೂಲಕ, ವಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿರುವ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ (ಎಂ.ಇಡಿ 2005) ಮತ್ತು ಕನ್ನಡ ಸಾಹಿತ್ಯದಲ್ಲಿ( ಎಂ.ಎ 2010) ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಸಂದರ್ಭದಲ್ಲಿ ಪಿಎಚ್.ಡಿ. ಪದವಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ,

ಪಿ ಎಚ್ ಡಿ ಮಹಾಪ್ರಬಂಧ
: ಕನ್ನಡ ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣದ ನೆಲೆಗಳು 2021. ರೀಜನಲ್ ಕಾಲೇಜ್ ಆಪ್ ಎಜುಕೇಶನ್ ಮೈಸೂರು ಇಲ್ಲಿ ಸರ್ಟಿಫಿಕೇಟ್ ಇನ್ ಎಜುಕೇಶನಲ್ ರಿಸರ್ಚ್ ಮೆಥಡಾಲಜಿ(CERM) (2022). ಹೀಗೆ ವೃತ್ತಿ ಬದುಕಿನ ಉದ್ದಕ್ಕೂ ಉನ್ನತ ಶಿಕ್ಷಣವನ್ನು ಕೈಗೊಂಡಿದ್ದಾರೆ.

ಇವರ ಮಹಾಪ್ರಬಂಧ ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ ಶೀರ್ಷಿಕೆಯಡಿ ಉಡುಪಿಯ ಭಾರತ ಪ್ರಕಾಶನ ಹೊರತಂದಿದೆ. ಇವರ ಲೇಖನಗಳು ಉದಯವಾಣಿ ಮತ್ತು ಇತರ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ. ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರಗೊಂಡಿವೆ. ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ ಹೊರತಂದಿರುವ ಭಾಷೆಯ ಬೋಧನೆ ಮತ್ತು ಕಲಿಕೆ ಕೆಲವು ಮುನ್ನೋಟಗಳು ಎನ್ನುವ ಕೃತಿಯಲ್ಲಿ ಇವರ ಸಂಶೋಧನಾ ಲೇಖನ ಪ್ರಕಟಗೊಂಡಿದೆ. ಸ್ಥಳೀಯ ಚಾನೆಲ್ಗಳಲ್ಲಿ ಶಿಕ್ಷಣ ಸಂಬಂಧಿ ಚರ್ಚೆಗಳಲ್ಲಿ ಪಾಲ್ಗೊಂಡು ಶಿಕ್ಷಣ ಕ್ಷೇತ್ರದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿರುತ್ತಾರೆ. ಶಿಕ್ಷಕರ ತರಬೇತಿ ಮೊಡ್ಯೂಲ್ಗಳ ತಯಾರಿ ಹಾಗೂ ಇತರ ಸಂಪನ್ಮೂಲ ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡಿರುತ್ತಾರೆ.

ವಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಸುಮಾರು ರೂಪಾಯಿ ಎರಡು ಕೋಟಿ ಮಿಕ್ಕಿದ ದೇಣಿಗೆಗಳನ್ನು ಪಡೆದು ಶಾಲೆಯ ಸರ್ವಾಂಗೀಣ ಬೆಳವಣಿಗೆ ಸಾಧಿಸಿದ್ದಾರೆ.

ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಇಂಟೆಲ್ ಸಂಸ್ಥೆಯಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಶಾಲೆಯು ಭಾಜನವಾಗಿದ್ದು, ಪ್ರಶಸ್ತಿಯನ್ನು 2007 ರಲ್ಲಿ ಚಂಡೀಗಡದಲ್ಲಿ ಸ್ವೀಕರಿಸಿರುತ್ತಾರೆ.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (2009), ರಾಜ್ಯ ಶಿಕ್ಷಕ ಪ್ರಶಸ್ತಿ (ವಿಶೇಷ ಕೆಟಗರಿಯಲ್ಲಿ) 2010 ಪಡೆದ ಇವರು 2025ರಲ್ಲಿ ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರದ ವತಿಯಿಂದ ಗುರುವಂದನೆ ಗೌರವವನ್ನು ಪಡೆದಿರುತ್ತಾರೆ.

ಕರ್ನಾಟಕದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸದಸ್ಯರಾಗಿ (2005-2010), ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ (2009-10), ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುತ್ತಾರೆ.

ಚುನಾವಣೆಯ ಮಾಸ್ಟರ್ ಟ್ರೈನರ್ ಆಗಿ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭಾ ಚುನಾವಣೆಗಳ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ. 2024ರ ರಾಷ್ಟ್ರೀಯ ಮತದಾರ ದಿನದಂದು ಘನತೆವೆತ್ತ ರಾಜ್ಯಪಾಲರಾದ ಥ್ಯಾವರ್ ಚಂದ ಗೆಹ್ಲೋಟ್ ಇವರಿಂದ ರಾಜ್ಯ ಸಂಪನ್ಮೂಲ ವ್ಯಕ್ತಿ (ಎಸ್.ಎಲ್.ಎಂ.ಟಿ.) ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಉತ್ತಮ ಗುಣಮಟ್ಟದ ನಾಗರೀಕ ಸೇವೆಯನ್ನು ನೀಡಲು ಕರ್ನಾಟಕ ಸರ್ಕಾರವು ಆರಂಭಿಸಿರುವ ಸಕಾಲ ಯೋಜನೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ೨000ಕ್ಕೂ ಮಿಕ್ಕ ನೌಕರರಿಗೆ ತರಬೇತಿಯನ್ನು ನೀಡಿರುತ್ತಾರೆ. ಡಯಟ್ ಉಡುಪಿಯಲ್ಲಿ ಇವರು ಶಾಲೆಗಳಲ್ಲಿ ಕ್ಲಬ್ ಚಟುವಟಿಕೆಗಳ ಕುರಿತು ಅಧ್ಯಯನವನ್ನು ಕೈಗೊಂಡು ವರದಿಯನ್ನು ಸಲ್ಲಿಕೆ ಮಾಡಿರುತ್ತಾರೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕುರಿತ ಜಾಗೃತಿಯನ್ನು ಜಿಲ್ಲೆಯಾದ್ಯಂತ ಮೂಡಿಸಿ 100 ಕ್ಕೂ ಹೆಚ್ಚು ಶಾಲೆಗಳಿಗೆ ಎಫ್.ಎಲ್.ಎನ್. ಸಾಧಿತ ಶಾಲೆಗಳಾಗಿ ಗುರುತಿಸುವ ಕಾರ್ಯವನ್ನು ನಡೆಸಿರುತ್ತಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ನಡೆಸಿದ ಪ್ರಯತ್ನಗಳಿಂದ ಜಿಲ್ಲೆಯ ಹತ್ತಿಪ್ಪತು ಶಾಲೆಗಳು ಅಭಿವೃದ್ಧಿಯನ್ನು ಕಂಡಿವೆ. ಸಹೃದಯೀ ನಾಗರೀಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸಹಾಯವನ್ನು ಒದಗಿಸುವ ಪ್ರಯತ್ನದಲ್ಲಿ ಸಫಲತೆಯನ್ನುಪಡೆದಿರುತ್ತಾರೆ.

ಸಾಂಸಾರಿಕವಾಗಿ ಉಡುಪಿ ಕುಕ್ಕಿಕಟ್ಟೆಯಲ್ಲಿರುವ ಇವರು ಧರ್ಮಪತ್ನಿ ಶ್ರೀಮತಿ ರೇವತಿ ಕಾಮತ್, ಪುತ್ರಿ ನವ್ಯಾ ಕಾಮತ್ ರೊಂದಿಗೆ ವಾಸವಾಗಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments