ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ: ಎಸ್ಐಟಿ ರಚನೆಗೆ ಮಂಜುನಾಥ ಭಂಡಾರಿ ಒತ್ತಾಯ
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ಜೀವಕ್ಕೆ ಬಂದಿರುವ ಬೆದರಿಕೆಗಳ ಹಿನ್ನಲೆಯಿಂದ ಆರ್ಎಸ್ ಎಸ ಚಟುವಟಿಕೆಗಳ ಬಗ್ಗೆ ತನಿಖೆ ಮಾಡಲು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಸಾರ್ವಜನಿಕ ಸ್ಥಳಗಳು, ಶಾಲೆಗಳು ಮತ್ತು ಸರ್ಕಾರಿ ಮೈದಾನಗಳಲ್ಲಿ ಅನುಮತಿ ಇಲ್ಲದೆ ಆರ್ಎಸ್ಎಸ್ (RSS) ಚಟುವಟಿಕೆಯನ್ನು ನಡೆಸದಂತೆ ನಿರ್ಬಂಧ ಹೇರಬೇಕೆಂದು ಕೋರಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಈಗ ರಾಜ್ಯದಲ್ಲಿ ಬಹು ಚರ್ಚಿತ ವಿಷಯವಾಗಿದೆ. ಈ ಸೈದ್ಧಾಂತಿಕ ನಿಲುವಿನ ಕಾರಣಕ್ಕಾಗಿ, ಸಚಿವರ ಜೀವಕ್ಕೆ ಆಪತ್ತು ತರುವಂತಹ ಗಂಭೀರ ಬೆದರಿಕೆಗಳು ಮತ್ತು ನಿಂದನಾತ್ಮಕ ಹೇಳಿಕೆಗಳು ಸೃಷ್ಟಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಆದ್ದರಿಂದ ಕರ್ನಾಟಕ ಸರ್ಕಾರವು ಈ ಬಗ್ಗೆ ಒಬ್ಬ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಮತ್ತು ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಮತ್ತು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆ.ಪಿ.ಸಿ.ಸಿ) ಕರ್ನಾಟಕದ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತದೆ.
ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ಆರ್ಎಸ್ಎಸ್ ಯುವಕರ ಮನಸ್ಸಿನಲ್ಲಿ ‘ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ’ ಎಂದು ಹೇಳಿದ ಬೆನ್ನಲ್ಲೇ, ಅವರಿಗೆ ನಿರಂತರವಾಗಿ ಬೆದರಿಕೆ ಮತ್ತು ನಿಂದನೆಯ ಕರೆಗಳು ಬರುತ್ತಿವೆ ಎಂದು ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ, ಅವರ ಕುಟುಂಬದ ಸದಸ್ಯರರನ್ನು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದು ಸಂಘ ಪರಿವಾರದ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ ಎಂದು ಸಚಿವರು ಪ್ರಶ್ನಿಸಿರುವುದು, ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಈ ಮನಸ್ಥಿತಿಯು ಪ್ರಗತಿಪರ ಚಿಂತನೆಗಳ ದಮನಕ್ಕೆ ನೇರವಾಗಿ ಕಾರಣವಾಗುತ್ತದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಆರ್ಎಸ್ಎಸ್ ಪ್ರಚಾರಕರಾದ ಶ್ರೀ ಹನುಮೇಗೌಡ ಅವರು ನೀಡಿರುವ ಹೇಳಿಕೆಗಳು ಪರಿಸ್ಥಿತಿಯ ಅಪಾಯವನ್ನು ಇನ್ನಷ್ಟು ಹೆಚ್ಚಿಸಿವೆ. ತಮ್ಮ ವಿರೋಧಿಗಳನ್ನ ಮಟ್ಟ ಹಾಕಲು ಆರ್.ಎಸ್.ಎಸ್. ಹಿಂದಿನಿಂದಲೂ ‘ವ್ಯವಸ್ಥಿತ ತಂತ್ರಗಾರಿಕೆ’ ನಡೆಸಿದೆ ಎಂದಿರುವ ಅವರು. “ಸೈದ್ಧಾಂತಿಕ ವಿರೋಧಿಗಳಾಗಿದ್ದ ಗೌರಿ ಲಂಕೇಶ್ ಆಥವಾ ಡಾ.ಎಂ.ಎಂ.ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ ರೀತಿಯಲ್ಲಿ, ಪ್ರಿಯಾಂಕ್ ಖರ್ಗೆ ಅವರಿಗೂ ಆಪತ್ತು ಬರುವ ಸಾಧ್ಯತೆಗಳಿವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಆರ್ಎಸ್ಎಸ್ ಅನ್ನು ಪ್ರಶ್ನಿಸಿದ ಡಾ. ಚಿತ್ತರಂಜನ್ ಅವರಂತಹವರ ಹತ್ಯೆಯ ರಹಸ್ಯ ಇಂದಿಗೂ ಹೊರಬಂದಿಲ್ಲ ಎಂದೂ ಹನುಮೇಗೌಡರು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎದುರಿಸುತ್ತಿರುವ ಬೆದರಿಕೆಗಳು ಕೇವಲ ರಾಜಕೀಯ ಟೀಕೆಗಳಲ್ಲ; ಬದಲಿಗೆ, ಸೈದ್ಧಾಂತಿಕ ವಿರೋಧವನ್ನು ಹತ್ತಿಕ್ಕಲು ನಡೆಸುತ್ತಿರುವ ಅಪಾಯಕಾರಿ ಪಿತೂರಿಗಳ ಭಾಗವಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಉನ್ನತ ಮಟ್ಟದ ತನಿಖೆ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳು ಮತ್ತು ನಿಂದನಾತ್ಮಕ ಸಂದೇಶಗಳ ಕುರಿತು ಕೂಡಲೇ ವಿಶೇಷ ತನಿಖಾ ತಂಡವನ್ನು ರಚಿಸಿ, ಕರೆ ಮಾಡಿದ ವ್ಯಕ್ತಿಗಳು ಹಾಗೂ ಅವರ ಹಿಂದಿರುವ ಕ್ಷುದ್ರ ಶಕ್ತಿಗಳ ಮೂಲವನ್ನು ಪತ್ತೆ ಹಚ್ಚಿ, ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು.
ಸಚಿವರ ಜೀವಕ್ಕೆ ಭದ್ರತೆ: ಸೈದ್ಧಾಂತಿಕ ರಾಜಕಾರಣ ಮಾಡುತ್ತಿರುವ ಸಚಿವರ ಜೀವಕ್ಕೆ ಗಂಭೀರ ಅಪಾಯದ ಮುನ್ಸೂಚನೆ ಇರುವುದರಿಂದ, ಅವರಿಗೆ ಮತ್ತು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಅತ್ಯುನ್ನತ ಮಟ್ಟದ ಭದ್ರತೆಯನ್ನು ತಕ್ಷಣವೇ ಒದಗಿಸಬೇಕು.
ಆರ್ಎಎಸ್ ಚಟುವಟಿಕೆ ಪರಿಶೀಲನೆ: ಮಾಜಿ ಪ್ರಚಾರಕ ಹನುಮೇಗೌಡರು ಆರ್.ಎಸ್.ಎಸ್ ಮೇಲೆ ಮಾಡಿರುವ, ಸಣ್ಣ ಮಕ್ಕಳ ತಲೆಗೆ ವಿಷ ಬಿತ್ತುತ್ತಾರೆ,” ‘ಸರ್ಕಾರಿ ಜಾಗವನ್ನು ಯೋಗಾಸನ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಾರೆ.” ಮತ್ತು “ಭ್ರಷ್ಟಾಚಾರದ ಹಣವನ್ನು ಬೇನಾಮಿ ಖಾತೆಗಳಲ್ಲಿ ಇಡುತ್ತಾರೆ” ಎಂಬಂತಹ ಗಂಭೀರ ಆರೋಪಗಳ ಕುರಿತು ಸರ್ಕಾರದ ಮಟ್ಟದಲ್ಲಿ ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು.
ಸಚಿವ ಪ್ರಿಯಾಂಕ್ ಖರ್ಗೆಯವರ ಹೋರಾಟವು ಕೇವಲ ವ್ಯಕ್ತಿಗಳ ವಿರುದ್ಧವಲ್ಲ, ಬದಲಿಗೆ ‘ವಿಚಾರಧಾರೆಯೆಡೆಗೆ’ ಕರೆತರಬೇಕಾದ ‘ಕಲುಷಿತ ಮನಸ್ಥಿತಿಯ ವಿರುದ್ಧ’ವಾಗಿದೆ. ಆದ್ದರಿಂದ, ಸರ್ಕಾರವು ದೃಢವಾದ ಹೆಜ್ಜೆಗಳನ್ನು ಇರಿಸಿ, ಪ್ರಗತಿಪರ ಚಿಂತಕರು, ಮಕ್ಕಳು ಮತ್ತು ಯುವ ಸಮುದಾಯವನ್ನು ಇಂತಹ ವಿಷವರ್ತುಲದಿಂದ ರಕ್ಷಿಸಲು ಸರ್ಕಾರವು ವಿಶೇಷ ತನಿಖಾ ತಂಡ ರಚನೆ ಮಾಡಿ ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಮಂಜುನಾಥ್ ಭಂಡಾರಿಯವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ..