ಸರಕಾರದ ಉಚಿತ ಅಕ್ಕಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಜಾಲ ಬೇಧಿಸಿದ ಡಿಸಿಐಬಿ ಪೋಲಿಸರು – ಐವರ ಬಂಧನ
ಕುಂದಾಪುರ: ಸರಕಾರದ ಉಚಿತ ಅಕ್ಕಿಯನ್ನು ಸಂಗ್ರಹಿಸಿ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದಂಧೆಯನ್ನು ಡಿಸಿಐಬಿ ಪೊಲೀಸರು ಕುಂದಾಪುರ ಸಮೀಪದ ಕೋಟೆಶ್ವರದಲ್ಲಿ ಭೇಧಿಸಿದ್ದು, ಐದು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಕುಂದಾಪುರ ಮೂಡು ಗೋಪಾಡಿ ಮತ್ತು ಕೇರಳ ಮೂಲದವರು ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ ಡಿಸಿಐಬಿ ಪೊಲೀಸ್ ಇನ್ಸ್ ಪೆಕ್ಟರ್ ಮಂಜಪ್ಪ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಅಕ್ರಮವಾಗಿ ಸರಕಾರದ ಉಚಿತ ಅಕ್ಕಿಯನ್ನು ದಾಸ್ತಾನು ಮಾಡಿದ ಸ್ಥಳಕ್ಕೆ ದಾಳಿ ಮಾಡಿದ್ದು ಈ ವೇಳೆ ಐವರನ್ನು ಬಂಧಿಸಿದ್ದು, ಗೋದಾಮಿನಲ್ಲಿದ್ದ 55 ಟನ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಸರಕಾರದ ಉಚಿತ ಅಕ್ಕಿಯನ್ನು ಪಾಲಿಶ್ ಮಾಡಿ ಸೋನಾ ಮಸೂರಿ ಅಕ್ಕಿಯನ್ನಾಗಿಸಿ ಕೇರಳಕ್ಕೆ ಸಾಗಾಟ ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ
ಕಾರ್ಯಾಚರಣೆ ವೇಳೆ ರೂ 2.75 ಲಕ್ಷ ನಗದು, ಸ್ಥಳದಲ್ಲಿದ್ದ ಮೂರು ಕಾರು, ಒಂದು ಲಾರಿಯನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ಅಂದಾಜು ರೂ 1 ಕೋಟಿ ಆಗಿರುತ್ತದೆ.












