ಸರಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ: ಸಚಿವೆ ಡಾ. ಜಯಮಾಲಾ

Spread the love

ಸರಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ: ಡಾ. ಜಯಮಾಲಾ

ಉಡುಪಿ:  ಜನ ಸಾಮಾನ್ಯರ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

 ಅವರು ಶುಕ್ರವಾರ, ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ , ಉಡುಪಿ ಹಾಗೂ ಕಾಪು ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಅವುಗಳನ್ನು  ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಲೋಪವಾಗಿದೆ , ನಾಗರೀಕರೂ ಸರಕಾರದ ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆದು, ಯೋಜನೆಗಳ ಪ್ರಯೋಜನ ಪಡೆಯಬೇಕು, ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಸೂರು ಹೊಂದುವ ಕನಸು ಇರುತ್ತದೆ ಈ ನಿಟ್ಟಿನಲ್ಲಿ ಸರಕಾರ 94 ಸಿ ಮತ್ತು 94ಸಿಸಿ ಯೋಜನೆಗಳ ಮೂಲಕ ನೆರವು ನೀಡುತ್ತಿದೆ, ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆವತಿಯಿಂದ ಉದ್ಯೋಗಿನಿ ಯೋಜನೆಯಲ್ಲಿ 45 ವರ್ಷ ಒಳಗಿನ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಲು 3 ಲಕ್ಷ ರೂ ಸಾಲ ನೀಡಲಾಗುತ್ತಿದೆ, ಪ.ಜಾತಿ ಮತ್ತು ಪಂಗಡದ ಮಹಿಳೆಯರಿಗೆ 1.5 ಲಕ್ಷ  ಸಬ್ಸಿಡಿ ಹಾಗೂ ಇತರೆ ವರ್ಗದವರಿಗೆ 30% ಸಬ್ಸಿಡಿ ದೊರೆಯಲಿದೆ, ಕಿರುಸಾಲ ಯೋಜನೆಯಲ್ಲಿ 10 ಲಕ್ಷ ರೂ ಸಾಲ ದೊರೆಯಲಿದೆ ಮಹಿಳೆಯರು ಈ ಯೋಜನೆಗಳ ಪ್ರಯೋಜನ ಪಡೆಯುವಂತೆ ಸಚಿವರು ತಿಳಿಸಿದರು.

 ಕಾರ್ಯಕ್ರಮದಲ್ಲಿ ಮನಸ್ವಿನಿ ಯೋಜನೆಯ 4, ವೃದ್ದಾಪ್ಯ ವೇತನದ 37, ಸಂಧ್ಯಾ ಸುರಕ್ಷಾ ಯೋಜನೆಯ 21 ಮತ್ತು 2 ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ಹಾಗೂ ಕಾಪು ಮತ್ತು ಉಡುಪಿ ತಾಲೂಕಿನ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು  ಸಚಿವರು ವಿತರಿಸಿದರು.

ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾದ್ಯಕ್ಷ ರಾಜೇಂದ್ರ ಪಂದುಬೆಟ್ಟು,ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜು, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.


Spread the love