ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಸರ್ಕಾರ ಸನ್ನದ್ದ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Spread the love

ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಸರ್ಕಾರ ಸನ್ನದ್ದ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕುಂದಾಪುರ: ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡುವಲ್ಲಿ ಒಂದಷ್ಟು ತೊಡಕುಗಳಾಗಿವೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಉಚಿತ ಸೇವೆ ಸಿಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕ್ಕೆ ಮುಂದಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಜರುಗಿದ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್‍ರೀಚ್ ಸರ್ವೀಸ್ ಸೆಂಟರ್‍ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಉಚಿತ ಔಷಧಿ ಸಿಕ್ಕರೆ ಜನೌಷಧಿ ಕೇಂದ್ರದ ಅಗತ್ಯ ಇರುವುದಿಲ್ಲ. ಅದಕ್ಕಾಗಿಯೇ ಔಷಧಿ ಸರಬರಾಜು ವ್ಯವಸ್ಥೆಗಳನ್ನು ಪೂರ್ತಿಯಾಗಿ ಸುಧಾರಣೆ ಮಾಡುತ್ತಿದ್ದೇವೆ. ಸರ್ಕಾರಿ ಸೇವೆಗಳು ಅತ್ಯಂತ ಸುಲಭವಾಗಿ ಜನಸಾಮಾನ್ಯರಿಗೆ ಸಿಗಬೇಕು. ಕಾರ್ಯಕ್ರಮ ಘೋಷಣೆ ಮಾಡುವುದು ಮುಖ್ಯವಲ್ಲ. ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದೇವೆ ಎಂದರು.

ಚಿಕ್ಕ ಮಕ್ಕಳಲ್ಲಿ ವಾಕ್ ಶ್ರವಣವನ್ನು ಪತ್ತೆ ಹಚ್ಚುವುದೇ ಕಷ್ಟದ ಕೆಲಸ. ಚಿಕ್ಕ ವಯಸ್ಸಿನಲ್ಲೇ ಅದನ್ನು ಪತ್ತೆ ಹಚ್ಚಿ ಅದರ ಬಗ್ಗೆ ಚಿಕಿತ್ಸೆ ನೀಡಿದರೆ ಅವರು ಶೀಘ್ರವೇ ಗುಣಮುಖರಾಗಲು ಸಾಧ್ಯ. ಇದಕ್ಕೆ ನಿಪುಣತೆ ಇರುವ ತಂತ್ರಜÐರ ಕೊರತೆ ಇತ್ತು. ಆ ಕೊರೆತೆ ನೀಗಿಸಲು ಇಲಾಖೆ ಹಾಗೂ ಇಲ್ಲಿನ ವೈದ್ಯರು ಆಸಕ್ತಿ ವಹಿಸಿ ದಾನಿಗಳ ಸಹಕಾರದಿಂದ ವಾಕ್ ಶ್ರವಣ ಔಟ್‍ರೀಚ್ ಸರ್ವಿಸ್ ಘಟಕ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕಾರ್ಯ. ನಿವೃತ್ತ ಶುಶ್ರೂಷಕ ಅಧೀಕ್ಷಕಿ ದಿ. ವಿಜಯಬಾಯಿ ಅವರ ಸ್ಮರಣಾರ್ಥ ಪತಿ ಶಿವರಾಮ್ ಪುತ್ರನ್ ಮತ್ತು ಮಕ್ಕಳು ಕೊಡಮಾಡಿದ ವಾಕ್ ಶ್ರವಣ ಕೇಂದ್ರವು ಬಹಳ ಚೆನ್ನಾಗಿ ನಿರ್ಮಾಣಗೊಂಡಿದೆ. ಶಿವರಾಮ್ ಪುತ್ರನ್ ಅವರು ಹೃದಯ ಶ್ರೀಮಂತಿಕೆಯ ಪ್ರತೀಕವಾಗಿದ್ದಾರೆ. ಅನೇಕರಲ್ಲಿ ಹಣ ಇರುತ್ತದೆ. ಆದರೆ ಅದನ್ನು ದಾನ ಮಾಡುವ ಮನಸ್ಸು ಇರುವುದಿಲ್ಲ. ಸಮಾಜಕ್ಕೆ ಒಳ್ಳೆಯದನ್ನು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅವರು ಪುಣ್ಯದ ಕೆಲಸ ಮಾಡಿದ್ದಾರೆ ಎಂದರು.

ಆಸ್ಪತ್ರೆ ಉನ್ನತೀಕರಣಕ್ಕೆ ಆದ್ಯತೆ:
ಇಡೀ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ವಹಣೆ ಕಾಣದೆ ಹದಗೆಟ್ಟ ಡಯಾಲಿಸಿಸ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇಡೀ ರಾಜ್ಯದಲ್ಲಿ 800 ನೂತನ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕೆಲಸವನ್ನು ಮಾಡಿದ್ದೇವೆ. ಇದರ ಭಾಗವಾಗಿ ಇಂದು ಕುಂದಾಪುರದಲ್ಲೂ ಪ್ರಾರಂಭಿಸಿದ್ದೇವೆ. ಸುಮಾರು 48 ಹೊಸ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು, ಉಡುಪಿಯ ಹೊಸ ತಾಲೂಕು ಕೇಂದ್ರಗಳಲ್ಲೂ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜನರಿಗೆ ಪ್ರಯೋಜನವಾಗಲಿದೆ. 108 ಆಂಬುಲೆನ್ಸ್ ಸೇವೆಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಆಂಬುಲೆನ್ಸ್ ನಿರ್ವಹಣೆಗಾಗಿ ಹೊಸ ಟೆಂಡರ್ ಅನ್ನು ಕರೆಯುತ್ತಿದ್ದೇವೆ. ಹೊಸ ತಂತ್ರಜಾÐನ ಉಪಯೋಗಿಸಿಕೊಂಡು ಆಧುನೀಕರಣಕ್ಕೆ ಒತ್ತು ಕೊಟ್ಟು ತುರ್ತು, ಗುಣಮಟ್ಟದ ಸೇವೆ ನೀಡಲು ಸಂಪೂರ್ಣ ಬದಲಾವಣೆಗೆ ಮುಂದಾಗಿದ್ದೇವೆ. ಈಗಾಗಲೇ 272 ಹೊಸ ಆಂಬುಲೆನ್ಸ್‍ಗಳನ್ನು ಹಸ್ತಾಂತರಿಸಿದ್ದೇವೆ. ಗ್ಯಾರಂಟಿ ಜಾರಿಗೊಳಿಸುವುದುರ ಜೊತೆ ವಿವಿಧ ಇಲಾಖೆಗಳ ಉನ್ನತೀಕರಣಕ್ಕೆ ಸರ್ಕಾರ ಮುಂದಾಗಿದೆÉ. ಸುಮಾರು 500 ಕೋಟಿ ರೂ. ಅನುದಾನವನ್ನು ಈಗಾಗಲೇ ಇರುವ ಆಸ್ಪತ್ರೆಗಳ ಉನ್ನತೀಕರಣಕ್ಕೆ ಇಟ್ಟಿದ್ದೇವೆ. ಈ ಅನುದಾನದಲ್ಲಿ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಗಳು ಉನ್ನತೀಕರಣಗೊಳ್ಳಲಿವೆ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ, ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ ಗಡಾದ ಉಪಸ್ಥಿತರಿದ್ದರು.

ವಾಕ್ ಶ್ರವಣ ಘಟಕವನ್ನು ಕೊಡಮಾಡಿದ ದಾನಿ ಶಿವರಾಮ್ ಪುತ್ರನ್, ರೋಟರಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ, ವೈದ್ಯಾಧಿಕಾರಿ ರೋಬರ್ಟ್ ರೆಬೆಲ್ಲೊ, ಭಾನುಪ್ರಕಾಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ಸಿಬ್ಬಂದಿಗಳಾದ ವೀಣಾ, ನಯನ, ಶೋಭಾ ನಾಡಗೀತೆ ಹಾಡಿದರು. ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ ಪ್ರಸ್ತಾಪಿಸಿ ಸ್ವಾಗತಿಸಿದರು. ವೀಣಾ ಧನ್ಯವಾದವಿತ್ತರು.


Spread the love