ಸಾಮಾಜಿಕ ಜಾಲತಾಣ ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ: ರೋಹಿತ್ ಚಕ್ರತೀರ್ಥ

Spread the love

ಸಾಮಾಜಿಕ ಜಾಲತಾಣ ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ: ರೋಹಿತ್ ಚಕ್ರತೀರ್ಥ

ವಿದ್ಯಾಗಿರಿ: ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆ ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು.

ಆಳ್ವಾಸ್ ನುಡಿಸಿರಿಯ ಮೂರನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ `ಸಾಮಾಜಿಕ ಜಾಲತಾಣ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು.

ಸಾಮಾಜಿಕ ಜಾಲತಾಣಗಳ ಉಪಯೋಗಗಳನ್ನು ವಿವರಿಸುತ್ತಾ ಅನೇಕ ದೊಡ್ಡ ಉದ್ಯಮಗಳು ಸಾಮಾಜಿಕ ಜಾಲತಾಣದಲ್ಲಿವೆ. ಪ್ರತಿಕ್ರಿಯೆ ಎಂಬ ಮೂಲಭೂತ ತತ್ವದಿಂದ ಜಗತ್ತು ನಡೆಯುತ್ತಿದೆ. ಎಲ್ಲ ವಿಷಯಗಳ ಪ್ರಾಥಮಿಕ ಅಕ್ಷರ ಪ್ರತಿಕ್ರಿಯೆ. ನಿಜವಾದ ಸ್ವಾತಂತ್ರ್ಯ ದೊರಕಿದ್ದು ಸಾಮಾಜಿಕ ಜಾಲತಾಣಗಳಿಂದ. ಏಕೆಂದರೆ ಮಾಧ್ಯಮಗಳಲ್ಲಿ ತಕ್ಷಣ ಪ್ರತಿಕ್ರಿಯೆ ಅಸಾಧ್ಯ. ಆದ್ದರಿಂದ ಸಾಮಾಜಿಕ ಜಾಲತಾಣವು ಪ್ರತಿಕ್ರಿಯಾ ಮಾರ್ಗವನ್ನು ಕಲ್ಪಿಸಿಕೊಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿರುವ ಧೋರಣೆಗಳನ್ನು ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಆದ್ದರಿಂದ ಇವು ಪ್ರಾತಿನಿಧ್ಯವನ್ನು ಪಡೆಯುತ್ತಿವೆ ಎಂದರು. ಫೇಸ್ ಬುಕ್‍ನಲ್ಲಿ ಪ್ರತೀದಿನ 5 ಲಕ್ಷ ಜನ ಹೊಸಖಾತೆಗಳನ್ನು ತೆರೆಯುತ್ತಾರೆ. ಅದರಲ್ಲಿ ಅನೇಕ ನಕಲಿ ಖಾತೆಗಳು ತೆರೆಯಲ್ಪಡುತ್ತವೆ. ಹಾಗೆಯೇ ಮೊದಲಿಗೆ ಟ್ವಿಟರ್‍ನಲ್ಲಿ 140 ಕ್ಯಾರೆಕ್ಟರ್‍ಗಳ ಮಿತಿ ಇತ್ತು, ಆದರೆ ನಂತರ ದಿನಗಳಲ್ಲಿ ಅದರ ಮಿತಿಯನ್ನು 180ಕ್ಕೆ ಏರಿಸಲಾಯಿತು. ಟ್ವಿಟ್ಟರ್‍ನಲ್ಲಿ ಪ್ರತಿದಿನ ಟ್ವೀಟ್ ಮಾಡುವವರ ಸಂಖ್ಯೆ 50 ಕೋಟಿ ಹಾಗೂ ಪ್ರತಿ ಸೆಕೆಂಡಿಗೆ 6000 ಜನ ಟ್ವೀಟ್ ಮಾಡುತ್ತಾರೆ. ಯುಟ್ಯೂಬ್‍ನಲ್ಲಿ 300 ಗಂಟೆಗಳ ಕಾಲ ಕುಳಿತು ನೋಡುವ ವೀಡಿಯೋಗಳು ಒಂದು ನಿಮಿಷದಲ್ಲಿ ಅಪ್‍ಲೋಡ್ ಆಗುತ್ತವೆ ಎಂಬ ಅಂಕಿ ಅಂಶಗಳನ್ನು ತಿಳಿಸಿದರು.

ಸಾಮಾಜಿಕ ಜಾಲತಾಣಗಳು ಜನರಲ್ಲಿ ಹರಿದಾಡುವ ಸುದ್ದಿಗೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಜನಸಾಮಾನ್ಯರಿಗೆ ಸಿಗುವ ಸಂದೇಶಗಳಿಗೆ ತಕ್ಷಣದ ಪರ ಅಥವಾ ವಿರೋಧಗಳನ್ನು ಧ್ವನಿಯೆತ್ತುವ ಏಕೈಕ ಮಾಧ್ಯಮ ಸಾಮಾಜಿಕ ಜಾಲತಾಣಗಳು. ಉಳಿದ ಮಾಧ್ಯಮಗಳಲ್ಲಿ ಜನರ ಪ್ರತಿಕ್ರಿಯೆಯನ್ನು ಹತ್ತಿಕ್ಕುವ ಕಾರ್ಯ ಹಾಗೂ ಪಕ್ಷಾತೀತ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಜನರ ಭ್ರಮೆಗಳ ಕಳಚುವಿಕೆಯೊಂದಿಗೆ ನಿಜವಾದ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಸಾಹಿತ್ಯದ ಬಗ್ಗೆ ಮಾತನಾಡಿದ ರೋಹಿತ್ ಚಕ್ರತೀರ್ಥ, ಅರ್ಥವಂತಿಕೆಯ ಸಾಹಿತ್ಯಗಳು ಸಾಮಾಜಿಕ ಜಾಲತಾಣಗಳಿಂದ ಹುಟ್ಟಿಕೊಳ್ಳುತ್ತವೆ. ಇವು ನೇರವಾಗಿ ಜನಸಾಮಾನ್ಯರಿಗೆ ತಲುಪುತ್ತಿವೆ. ಸಾಮಾಜಿಕ ಜಾಲತಾಣಗಳು ಮೇಲು ಅಥವಾ ಕೀಳು ಎಂಬ ಮನೋಭಾವನೆಯನ್ನು ಹುಟ್ಟಿಸುವುದಿಲ್ಲ. ವಸ್ತುನಿಷ್ಠ ಸ್ವಾತಂತ್ರ್ಯ ಸಾಮಾಜಿಕ ಜಾಲತಾಣದಲ್ಲಿದೆ. ಸಾಮಾಜಿಕ ಜಾಲತಾಣಗಳು ಚೌಕಟ್ಟಿನ ಹಿತಾಸಕ್ತಿಯನ್ನು ಹೊಂದಿರದೇ ತನ್ನದೇ ಆದ ಸ್ವಾತಂತ್ರ್ಯವನ್ನು ಹೊಂದಿದೆ. ಇವು ಬರಹದ ಜೊತೆಗೆ ದೃಶ್ಯ ಮಾಧ್ಯಮದ ಅವಕಾಶವನ್ನು ಹೊಂದಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಲೇಖನಗಳ ಓದುಗರ ಸಂಖ್ಯೆ ಅಧಿಕ ಜೊತೆಗೆ ಬರಹಗಾರರು ಮತ್ತು ಜನಸಾಮಾನ್ಯರ ನಡುವಣ ಅಂತರವನ್ನು ಕಡಿಮೆ ಮಾಡಿದೆ. ಇದರಿಂದ ಮುಖಾಮುಖಿ ಸಂವಹನ ಸಾಧ್ಯ. ಹಳೆಬೇರು ಮತ್ತು ಹೊಸ ಚಿಗುರುಗಳ ಸಮಾಗಮ ಸಾಧ್ಯ ಎಂದು ತಿಳಿಸಿದರು.

ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ ಎಸ್. ಘಂಟಿ ಹಾಗೂ ನುಡಿಸಿರಿ ಸಮಿತಿಯ ಉಪಾಧ್ಯಕ್ಷರಾದ ಸಂಪತ್ ಕುಮಾರ್ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಕೃಷ್ಣರಾಜ ಕರಬ ನಿರೂಪಿಸಿದರು.

ಶರಧಿ ಆರ್. ಫಡ್ಕೆ
ಆಳ್ವಾಸ್ ಕಾಲೇಜು ,ಮೂಡಬಿದ್ರೆ


Spread the love