ಸಿಸಿಬಿಐ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ವಂ|ಡೆನಿಸ್ ಡೆಸಾ ನೇಮಕ
ಉಡುಪಿ: ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನ (ಸಿಸಿಬಿಐ)ದ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ನೇಮಕಗೊಂಡಿದ್ದಾರೆ.
ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅತಿ ವಂ|ಡಾ|ಫ್ರಾನ್ಸಿಸ್ ಸೆರಾವೊ ಅಧ್ಯಕ್ಷರಾಗಿರುವ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿಯ ಸಭೆಯು 2024 ಸಪ್ಟೆಂಬರ್ 10-11 ರಂದು ನಡೆದಿದ್ದು ಈ ವೇಳೆ ಡೆನಿಸ್ ಡೆಸಾ ಅವರ ನೇಮಕಾತಿ ನಡೆದಿದೆ. ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿಯ ಸದಸ್ಯರ ಅವಧಿ 4 ವರ್ಷಗಳಾಗಿದ್ದು ಅಕ್ಟೋಬರ್ 1 ರಿಂದ ಆರಂಭಗೊಳ್ಳಲಿದೆ.
ಕ್ರೈಸ್ತ ಐಕ್ಯತಾ ಅಯೋಗ ಸಮುದಾಯದಲ್ಲಿ ಇತರ ಕ್ರೈಸ್ತ ಸಭೆಗಳು, ಇತರ ಧರ್ಮಗಳೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಇರಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿದ್ದು ಪರಸ್ಪರ ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸೇವೆಯನ್ನು ನೀಡುತ್ತದೆ.
ವಂ|ಡೆನಿಸ್ ಡೆಸಾ ಅವರು ಇತರ ಸಮುದಾಯಗಳು, ಕ್ರೈಸ್ತ ಸಭೆಗಳು ಹಾಗೂ ಅಂತರ್ ಧರ್ಮಿಯ ಸಂವಾದದಲ್ಲಿ ಅತೀ ಹೆಚ್ಚಿನ ಪರಿಣತಿ ಹೊಂದಿದ್ದು, ಪ್ರಸ್ತುತ ಅವರು ಧರ್ಮಗುರುಗಳಾಗಿ ಸೇವೆ ನೀಡುತ್ತಿರುವ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮಗಳ ಸದಸ್ಯರನ್ನು ಒಗ್ಗೂಡಿಸಿ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯನ್ನು ಹುಟ್ಟು ಹಾಕಿ ಮಾದರಿ ಕಾರ್ಯಕ್ರಮಗಳ ಮೂಲಕ ಹಿಂದೂ, ಮುಸ್ಲಿಂ ಧರ್ಮಗಳ ನಡುವೆ ಉತ್ತಮ ಭಾಂಧವ್ಯವನ್ನು ಬೆಸೆಯುವ ಕೆಲಸ ಮಾಡಿಕೊಂಡು ಬಂದಿರುತ್ತಾರೆ.
ವಂ|ಡೆನಿಸ್ ಡೆಸಾ ಅವರ ನೇಮಕಾತಿಗೆ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸಹಿತ ಧರ್ಮಗುರುಗಳು, ತೊಟ್ಟಂ ಚರ್ಚಿನ ಪಾಲನಾ ಸಮಿತಿ ಹಾಗೂ ಕ್ರೈಸ್ತ ಸಮುದಾಯ ಹರ್ಷ ವ್ಯಕ್ತಪಡಿಸಿದ್ದಾರೆ.













