ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಧಕ್ಕೆ ತರುವ ಯತ್ನ -ಪ್ರೊ.ಎಂ.ಬಿ. ಪುರಾಣಿಕ್

Spread the love

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಧಕ್ಕೆ ತರುವ ಯತ್ನ -ಪ್ರೊ.ಎಂ.ಬಿ. ಪುರಾಣಿಕ್

ಮಂಗಳೂರು: ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಮೂರು ದಿನಗಳ ಹಿಂದೆ ನಡೆದ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಉಂಟು ಮಾಡುವ ಘಟನೆ ಬಗ್ಗೆ ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಂಪುಟ ನರಸಿಂಹ ಮಠದ ಸಿಬ್ಬಂದಿ ಕುಮಾರ ಬನ್ನಿಂತಾಯ ಅವರ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ಆಘಾತಕಾರಿ. ಪೂರ್ವ ನಿಯೋಜಿತವಾಗಿ ಸಂಚು ನಡೆಸಿ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಸೃಷ್ಟಿಸಲಾಗಿದೆ. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮತ್ತು ಸಂಬಂಧಿಸಿದ ಅಧಿಕಾರಗಳ ಸಮ್ಮುಖವೇ ಘಟನೆ ನಡೆದಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೇವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಮತ್ತು ವ್ಯವಸ್ಥಾಪನಾ ಮಂಡಳಿ ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ದೇವಳದ ಪಾವಿತ್ರ್ಯತೆ ಹಾಗೂ ಪರಂಪರೆಗೆ ಚ್ಯುತಿ ತರುವಂತಹ ಕೆಲಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಠದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ ನಡೆಸಿದರೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಕೆಯಾಗುವುದಿಲ್ಲ ಎಂದು ನಾಮಫಲಕ ಹಾಕಿರುವುದು, ಧ್ವನಿವರ್ಧಕದ ಮೂಲಕ ಹೇಳುವುದು ಸರಿಯಲ್ಲ. ಕೆಲವೇ ಮಂದಿ ಸ್ಥಾಪಿತ ಹಿತಾಸಕ್ತಿಗಳ ವೈಯಕ್ತಿಕ ದ್ವೇಷ ಸಾಧನೆಗೆ ಈ ವಿಚಾರ ಬಳಸಿಕೊಳ್ಳಲಾಗುತ್ತಿದೆ ಎಂದರು.

ಸಾಮರಸ್ಯ ಧಾರ್ಮಿಕ ವಾತಾವರಣ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್‌ ಆದ್ಯತೆ ನೀಡಲಿದೆ. ಪುಣ್ಯ ಕ್ಷೇತ್ರದಲ್ಲಿ ನಡೆಯುವ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಮುಂತಾದ ಧಾರ್ಮಿಕ ಕಾರ್ಯಗಳು ನಂಬಿಕೆ ಆಶಯದ ಅನುಸಾರವಾಗಿ ನೆರವೇರಿಸಲು ಮುಂದಾಗಿರುವುದು ಯಾವುದೇ ಹಿಂದೂ ಬಾಂಧವರ ಸಾಂವಿಧಾನಿಕ ಹಕ್ಕು. ಪರಸ್ಪರ ಪ್ರೀತಿ, ವಿಶ್ವಾಸ, ಗೌರವಯುತ ಧಾರ್ಮಿಕ ಸೌಹಾರ್ದತೆ ಅವಶ್ಯ. ಮುಂದಿನ ದಿನಗಳಲ್ಲಿ ಸಂಘರ್ಷ, ಅಪನಂಬಿಕೆ, ಅಗೌರವ ಸೂಚಿಸುವ ಘಟನೆ ಈ ಕ್ಷೇತ್ರದಲ್ಲಿ ನಡೆಯಬಾರದು. ಪರಸ್ಪರ ಒಗ್ಗಟ್ಟಿನ ಸಾಮರಸ್ಯ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್‌ ಶ್ರಮಿಸಲಿದೆ ಎಂದು ಅವರು ಹೇಳಿದರು.

ದೇವಸ್ಥಾನ ಮತ್ತು ಮಠ ಪರಸ್ಪರ ಸಂಘರ್ಷ ನಡೆಸಬಾರದು ಎಂದು ವಿಹಿಂಪ ವತಿಯಿಂದ ಎರಡೂ ಕಡೆಯವರಿಗೂ ಈ ಹಿಂದೆ ವಿನಂತಿಸಲಾಗಿದೆ. ಮಠದದಲ್ಲಿ ಸರ್ಪ ಸಂಸ್ಕಾರ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಆದಕ್ಕಾಗಿ ಮಠದಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸಾಮೂಹಿಕವಾಗಿ ನಡೆಸಲಾಗುತ್ತದೆ. ಆದರೂ, ಮಠದಲ್ಲಿ ಸರ್ಪಸಂಸ್ಕಾರ ನಡೆಸುವುದರಿಂದ ದೇವಸ್ಥಾನದ ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಏಕೆಂದರೆ ಮಠದಲ್ಲಿ ಸರ್ಪ ಸಂಸ್ಕಾರ ನಡೆಸುವವರೂ ದೇವಸ್ಥಾನಕ್ಕೆ ಶುಲ್ಕ ಪಾವತಿಸುತ್ತಾರೆ. ಮಠದಲ್ಲಿ ವಿದ್ಯಾಭೂಷಣ ಸ್ವಾಮೀಜಿ ಅವರ ಕಾಲದಲ್ಲೂ ಸರ್ಪಸಂಸ್ಕಾರ ನಡೆಸಲಾಗುತ್ತಿತ್ತು. ದೇವಸ್ಥಾನಕ್ಕೆ ಬಂದಂತಹ ಭಕ್ತರನ್ನು ಒತ್ತಾಯ ಪೂರ್ವಕವಾಗಿ ಮಠಕ್ಕೆ ಕರೆದೊಯ್ದರೆ, ಅದು ತಪ್ಪು ಎಂದು ಎಂದು ಪ್ರೊ.ಎಂ.ಬಿ. ಪುರಾಣಿಕ್ ಹೇಳಿದರು.

ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಮಠದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿರುವ ಪ್ರಶಾಂತ್ ಭಟ್ ಮಾಣಿಲ ಮತ್ತು ಗುರುಪ್ರಸಾದ್ ಪಂಜ ಅವರು ವಿಶ್ವ ಹಿಂದೂ ಪರಿಷತ್‌ನ ಯಾವುದೇ ಜವಾಬ್ದಾರಿ ಹೊಂದಿಲ್ಲ. ಆರು ತಿಂಗಳ ಹಿಂದೆ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು.

ಪುತ್ತೂರಿನಲ್ಲಿ ಅಕ್ರಮ ಮರಳು ಗಣಿಕಾರಿಕೆ ವಿರುದ್ಧ ವರದಿ ಮಾಡಲು ತೆರಳಿದ ಖಾಸಗಿ ಟಿವಿ ವಾಹಿನಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ.ಆರೋಪಿಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಹಿಂಪ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ ಶೇಣವ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಹಿಂಪ ಕಾರ್ಯದರ್ಶಿ ಶಿವಾನಂದ ಮೆಂಡನ್ ಇದ್ದರು.


Spread the love