ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಎನ್ಐಎ ತನಿಖೆಯ ಬೇಡಿಕೆಗೆ ನನ್ನ ಅಭ್ಯಂತರವಿಲ್ಲ- ಯುಟಿ ಖಾದರ್

Spread the love

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಎನ್ಐಎ ತನಿಖೆಯ ಬೇಡಿಕೆಗೆ ನನ್ನ ಅಭ್ಯಂತರವಿಲ್ಲ- ಯುಟಿ ಖಾದರ್

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐ ಎ ತನಿಖೆಗೆ ಒಪ್ಪಿಸಲು ನನ್ನದೇನು ಅಭ್ಯಂತರವಿಲ್ಲ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು

ಅವರು ಸುದ್ದಿಗೋಷ್ಠಿಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ನಡೆಯುತ್ತಿರುವ ತನಿಖೆ ತೃಪ್ತಿಕರವಾಗಿಲ್ಲ. ಕೃತ್ಯಕ್ಕೆ ಅಂತರರಾಷ್ಟ್ರೀಯ ಹಣ ಹರಿದಿದ್ದು, ತನಿಖೆ ಎನ್ಐಎಗೆ ಒಪ್ಪಿಸಬೇಕೆಂಬ ವಿಪಕ್ಷಗಳ ಬೇಡಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಯಾವುದೇ ರೀತಿಯ ತನಿಖೆಯ ಬೇಡಿಕೆಗೆ ನನ್ನ ಅಭ್ಯಂತರವಿಲ್ಲ. ಯಾವುದೇ ತನಿಖೆಗೆ ಆಕ್ಷೇಪ ಇಲ್ಲ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಹೊರ ಬರಬೇಕು. ಯಾರೇ ಈ ಕೊಲೆ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ನನಗೆ ರಾಜಕೀಯ ಮುಖ್ಯ ಅಲ್ಲ. ಆದರೆ ಇಂತಹ ಘಟನೆಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಶಾಂತಿ ಸೌಹಾರ್ದತೆ ಹಾಳಾಗಬಾರದು ಎನ್ನುವುದು ನನ್ನ ಉದ್ದೇಶ ಎಂದರು.

ತಪ್ಪು ಮಾಡಿದವರನ್ನು ಬೆಂಬಲಿಸುವ ವ್ಯಕ್ತಿತ್ವ ನನ್ನದಲ್ಲ. ಅದರ ಬಗ್ಗೆ ನನ್ನ ಜಿಲ್ಲೆಯ ಕ್ಷೇತ್ರದ ಜನರಿಗೆ ಅರಿವಿದೆ. ಅಂದಿನ ಉದ್ವೇಗದ ವಾತಾವರಣದಲ್ಲಿ ಸೌಹಾರ್ದತೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ನನಗೆ ಸಿಕ್ಕ ಮಾಹಿತಿಯನ್ನು ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಅದು ನನ್ನ ಮತ್ತು ಜನರ ನಡುವಿನ ಸಂಬಂಧ. ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ವಹಿಸಿದ್ದಾರೆ. ಈ ವಿಷಯದಲ್ಲಿ ಟೀಕೆ ಮಾಡುವವರು, ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಆರೋಪ, ಟೀಕೆಗಳು ನನಗೆ ಹೊಸತೇನು ಅಲ್ಲ. ಪ್ರಥಮ ಬಾರಿಗೆ ಶಾಸಕನಾದಾಗಿನಿಂದಲೇ ಈ ಆರೋಪಗಳು ಕೇಳಿ ಬರುತ್ತಿವೆ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವರಿಗೆ ಅವಕಾಶ ಇದೆ. ನನ್ನ ಮೇಲೆ ವಿಶ್ವಾಸ ಇರುವವರು ಇಂತಹ ಮಾತುಗಳಿಗೆ ಮಹತ್ವ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಯು.ಟಿ. ಖಾದರ್ ಪ್ರತಿಕ್ರಿಯಿಸಿದರು.

ನನನ್ನು ಕ್ಷೇತ್ರ ಹಾಗೂ ಜಿಲ್ಲೆ, ರಾಜ್ಯದ ಜನರು ಕ್ರಿಕೆಟ್, ಮದುವೆ, ಊರಿನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ನಾನು ಭಾಗವಹಿಸುತ್ತೇನೆ. ಇದೀಗ ಬಿಜೆಪಿಯವರು ಆರೋಪಿಸುತ್ತಿರುವ ಕ್ರಿಕೆಟ್ಗೆ ನಾನು ಹೋಗಿಲ್ಲ. ಅಂದು ಹೋಗಲು ಸಾಧ್ಯವಾಗಿರಲಿಲ್ಲ. ಯಾರು ಈ ರೀತಿಯ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಸ್ಪಷ್ಟ ನಿಲುವು ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸೆ.8ರಿಂದ 10ರವರೆಗೆ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್ನ ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕರ್ನಾಟದಲ್ಲಿ ಈ ಬಾರಿ ನಡೆಸಲು ಅವಕಾಶ ನೀಡಿದ್ದು, ಬೆಂಗಳೂರಿನಲ್ಲಿ ಈ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದರು.

ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ಸ್ಪೀಕರ್, ಡೆಪ್ಯುಟಿ ಸ್ಪೀಕರ್ಗಳು, ಕಾರ್ಯದರ್ಶಿಗಳು ಸೇರಿದಂತೆ 300ರಷ್ಟು ಮಂದಿ ಭಾಗವಹಿಸಲಿದ್ದಾರೆ. ಸೆ.8ರಂದು ಸಂಜೆ 6 ಗಂಟೆಗೆ ವಿಧಾನ ಸೌಧದ ಗ್ರೌಂಡ್ ಸ್ಟೆಪ್ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಈ ಸಮ್ಮೇಳನಕ್ಕೆ ಚಾಲನೆ ದೊರಯಲಿದೆ. ಲೋಕಸಭೆ ಸ್ಪೀಕರ್, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಇತರ ಹಲವು ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ಹೊಸದಿಲ್ಲಿಯಲ್ಲಿ ಈ ಸಮಾವೇಶ ನಡೆದಿದ್ದರೆ, ಅದಕ್ಕಿಂತ ಹಿಂದಿನ ವರ್ಷ ರಾಜಸ್ತಾನದಲ್ಲಿ ನಡೆದಿತ್ತು. ಇದೀಗ ಮೊದಲ ಬಾರಿಗೆ ಕರ್ನಾಟಕದಲ್ಲಿ ನನ್ನ ಮತ್ತು ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರ ಅವಧಿಯಲ್ಲಿ ಈ ಅವಕಾಶ ದೊರಕಿದೆ. ಈ ಸಮ್ಮೇಳನವನ್ನು ಮಾದರಿಯಾಗಿ ನಡೆಸಲಾಗುವುದು. ಕೆಲವು ವಿಷಯಗಳ ಆಧಾರದಲ್ಲಿ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಸಂಸದೀಯ ಪ್ರಕ್ರಿಯೆಗಳನ್ನು ಬಲಪಡಿಸುವುದು, ಸ್ಪೀಕರ್ಗಳ ಪಾತ್ರ, ಪ್ರಸಕ್ತ ವಿಚಾರಗಳಿಗೆ ಸಂಬಂಧಿಸಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments