ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ ; ಹಕ್ಕುಚ್ಯುತಿ, ಮಾನನಷ್ಟ ಮೊಕದ್ದಮೆ: ಐವನ್ ಡಿಸೋಜಾ
ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ವಿರುದ್ದದ ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾಗಿದ್ದು, ಆರೋಪ ಮಾಡಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿಅವರ ವಿರುದ್ದ ಹಕ್ಕುಚ್ಯುತಿ ಮಂಡಿಸಲಾಗುವುದು. ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ನಿಯಮಾವಳಿ ಪ್ರಕಾರ, ಸಭಾಧ್ಯಕ್ಷರ ವಿರುದ್ದ ಆರೋಪ ಮಾಡುವ ಮೊದಲು ಆಂತರಿಕ ತನಿಖೆ ನಡೆಸಬೇಕು. ಕಾನೂನು ಪ್ರಕಾರ ಮಾಹಿತಿ ಸಂಗ್ರಹಿಸಬೇಕು. ಅದರ ಮಾಹಿತಿಯನ್ನು ಅವರ ಕಚೇರಿಗೆ ನೀಡಿ ಉತ್ತರ ಪಡೆಯಬೇಕು. ಸದನದ ಮುಂದಿಟ್ಟು ಚರ್ಚೆ ನಡೆಸಬೇಕು. ಕಾನೂನು ಪ್ರಕಾರ ಲಭ್ಯ ಪರಿಹಾರ ಪಡೆಯಲು ಸಾಧ್ಯವಾಗದಿದ್ದರೆ ಮಾತ್ರ ಸಾರ್ವಜನಿಕ ಆರೋಪ ಮಾಡಬಹುದು. ಆದರೆ ಕಾಗೇರಿಯವರು ಇದ್ಯಾವುದನ್ನೂ ಮಾಡದೆ ಆರೋಪ ಮಾಡಿರುವುದು ಸಂವಿಧಾನ ವಿರೋಧಿ ನಡೆ. ಇದು ಸದನಕ್ಕೆ ತೋರಿದ ಅಗೌರವ ಮತ್ತು ಎಲ್ಲ ಶಾಸಕರಿಗೆ ಮಾಡಿದ ಅವಮಾನ. ಆರೋಪದ ಬಗ್ಗೆ ಇದುವರೆಗೂ ಸ್ಪೀಕರ್ ಕಚೇರಿಗೆ ಅವರು ಲಿಖಿತ ದೂರು ನೀಡಿಲ್ಲ. ವಿಧಾನಸಭೆಯ ಮಾಜಿ ಅಧ್ಯಕ್ಷರಾಗಿರುವ ಕಾಗೇರಿಯವರಿಗೆ ಇದೆಲ್ಲ ತಿಳಿದಿರಬೇಕಿತ್ತು. ಅವರು ದಡ್ಡರೆಂದು ಗೊತ್ತಿತ್ತು. ಆದರೆ ಇಷ್ಟು ದಡ್ಡತನವಿದೆ ಎಂಬುದಾಗಿ ಗೊತ್ತಿರಲಿಲ್ಲ. ಹೇಗೆ ಭ್ರಷ್ಟಾಚಾರವಾಗಿದೆ, ಹೇಗೆ ಕಾನೂನಿಗೆ ವಿರುದ್ದವಾಗಿದೆ ಎನ್ನುವುದನ್ನು ಅವರು ವಿವರಿಸಬೇಕು. ಅಭಿವೃದ್ಧಿ ಕೆಲಸ, ನವೀಕರಣ ಮಾಡುವ ಮೊದಲು ಸ್ಪೀಕರ್ ತನ್ನ ಕಚೇರಿಗೆ ಲಿಖಿತವಾಗಿ ಆದೇಶ ನೀಡಿದ ಅನಂತರ ಕಾನೂನು ಬದ್ದ ಪ್ರಕ್ರಿಯೆಯಂತೆಯೇ ನಡೆಯುತ್ತದೆ. ಖರ್ಚನ್ನು ಸರಕಾರದ ಏಜೆನ್ಸಿಯಿಂದಲೇ ಮಾಡಲಾಗಿದೆ. ಕಾಗೇರಿಯವರು ಸ್ಪೀಕರ್ ಆಗಿದ್ದಾಗ ನವೀಕರಣವನ್ನು ಹೇಗೆ ಮಾಡಿಸಿದರೋ ಅದೇ ರೀತಿ ಖಾದರ್ ಕೂಡ ಮಾಡಿಸಿದ್ದಾರೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದಾದರೆ ಸದನದಲ್ಲಿ ಚರ್ಚಿಸುವ ಅವಕಾಶವಿದೆ. ಅದನ್ನು ಮಾಡದೆ ಆರೋಪ ಮಾಡಿರುವುದು ಉದ್ದೇಶಪೂರ್ವಕ ಎಂದು ಹೇಳಿದರು.
ವಿಧಾನ ಸೌಧದ ಒಳಗೆ 5 ದಿನದ ಪುಸ್ತಕ ಮೇಳಕ್ಕೆ 4.5 ಕೋ.ರೂ.ಖರ್ಚು ಮಾಡಿ ದುಂದುವೆಚ್ಚ ಮಾಡಲಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ. ಪುಸ್ತಕ ಮೇಳದಲ್ಲಿ300 ಮಳಿಗೆಗಳಿಗೆ ಮೂಲಸೌಕರ್ಯ, ಗೋಷ್ಠಿ ಮೊದಲಾದವುಗಳಿಗೆ ಕ್ರಮಬದ್ಧವಾಗಿ ಖರ್ಚು ಮಾಡಲಾಗಿದೆ. ಪುಸ್ತಕ ಮೇಳ ಮಾದರಿಯಾಗಿ ನಡೆದಿದೆ. ವಿಪಕ್ಷದ ನಾಯಕರು ಕೂಡ ಇದರಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತರ ರಾಜ್ಯಗಳು ಇದನ್ನೇ ಅನುಕರಿಸಿವೆ. ಈ ಮೂಲಕ ಶಾಸಕ ಭರತ್ ಶೆಟ್ಟಿ ಬರಹಗಾರರು, ಕವಿಗಳಿಗೆ ಅವಮಾನ ಮಾಡಿದಂತಾಗಿದೆ. ಶಾಸಕರಿಗೆ ಮೂಲಸೌಕರ್ಯ ಒದಗಿಸಲು ಮಾಡಿರುವ ಖರ್ಚಿನ ಬಗ್ಗೆಯೂ ಭರತ್ ಶೆಟ್ಟಿ ಟೀಕಿಸಿರುವುದು ಸರಿಯಲ್ಲ ಎಂದು ಐವನ್ ಡಿಸೋಜಾ ಹೇಳಿದರು
ಸದನದ ಕೆಲಸ ನಡೆಯುವಾಗಲೇ ಭರತ್ ಶೆಟ್ಟಿಯವರು ಅಲ್ಲಿಯೇ ಇದ್ದರು. ಅವರಿಗೆ ಸದನದಲ್ಲಿಯೇ ಹೇಳಬಹುದಿತ್ತು. ಅವರಿಗೆ ಯಾವುದೇ ಅಗತ್ಯ ಸೌಕರ್ಯ ಬೇಡವಾಗಿದ್ದರೆ ನಿರಾಕರಿಸಬಹುದು. ಆದರೆ ಇತರ ಶಾಸಕರಿಗೆ ಬೇಡವೆನ್ನಲು ಆಗುತ್ತದೆಯೇ ಎಂದು ಐವನ್ ಡಿಸೋಜಾ ಪ್ರಶ್ನಿಸಿದರು.
 
            
