ಹಾಲಿನ ಸಂಗ್ರಹ, ಲಾಭದಲ್ಲಿ ಏರಿಕೆ- ಹೊಸ ಉತ್ಪನ್ನಗಳು ಮಾರುಕಟ್ಟೆಗೆ: ಸಹಕಾರಿ ಹಾಲು ಒಕ್ಕೂಟದ ಸಾಧನೆ

Spread the love

ಹಾಲಿನ ಸಂಗ್ರಹ, ಲಾಭದಲ್ಲಿ ಏರಿಕೆ- ಹೊಸ ಉತ್ಪನ್ನಗಳು ಮಾರುಕಟ್ಟೆಗೆ: ಸಹಕಾರಿ ಹಾಲು ಒಕ್ಕೂಟದ ಸಾಧನೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ತನ್ನ 2024-25ನೇ ಸಾಲಿನ ಸಾಧನೆಗಳು ಮತ್ತು 2025-26ನೇ ಸಾಲಿನ ಪ್ರಗತಿ ವರದಿ ಜೊತೆಗೆ ಮುಂದಿನ ಯೋಜನೆಗಳನ್ನು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಿದೆ.

ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಮಾತನಾಡಿ, ಹಾಲಿನ ಶೇಖರಣೆಯಲ್ಲಿ ಕಳೆದ ಸಾಲಿನ ಹೋಲಿಕೆಗೆ 16% ಏರಿಕೆ ಕಂಡು ಪ್ರಸ್ತುತ ದಿನಕ್ಕೆ ಸರಾಸರಿ 3.97 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. 2024-25ರಲ್ಲಿ ಒಕ್ಕೂಟವು 1174 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದು, 12.79 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿದೆ. ದಿನಕ್ಕೆ 4.02 ಲಕ್ಷ ಲೀಟರ್ ಹಾಲು ಹಾಗೂ 81 ಸಾವಿರ ಕಿಲೋಗ್ರಾಂ ಮೊಸರು ಮಾರಾಟವಾಗುತ್ತಿದ್ದು, ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ ಕಲ್ಯಾಣ ಟ್ರಸ್ಟ್ ಮೂಲಕ 2.05 ಕೋಟಿ ರೂಪಾಯಿ ಪರಿಹಾರವನ್ನು ವಿವಿಧ ಕಾರಣಗಳಿಗೆ ಪಾವತಿಸಲಾಗಿದೆ ಎಂದು ವಿವರಿಸಿದರು.

ಒಕ್ಕೂಟದ ವ್ಯಾಪ್ತಿಯ 30,629 ರಾಸುಗಳಿಗೆ ವಿಮೆ ಮಾಡಲಾಗಿದ್ದು, 1177 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ತಿಂಗಳಿಗೆ ಸರಾಸರಿ 1000 ಟನ್ ಸೈಲೇಜ್ ಪೂರೈಕೆ ಮಾಡಲಾಗುತ್ತಿದ್ದು, ಹೈನುಗಾರರ ಉತ್ಪಾದನೆ ಹೆಚ್ಚಿಸಲು ಹೊರ ಜಿಲ್ಲೆಗಳಿಂದ ಉತ್ತಮ ತಳಿಯ ರಾಸುಗಳನ್ನು ಖರೀದಿಸಿ ರೈತರಿಗೆ ನೀಡುವ ಯೋಜನೆ ಜಾರಿಯಲ್ಲಿದೆ ಎಂದರು.

ಒಕ್ಕೂಟವು ವಿವಿಧ ರೈತ ಸಹಾಯ ಯೋಜನೆಗಳಿಗೆ 2.60 ಕೋಟಿ ರೂಪಾಯಿಗಳ ಅನುದಾನ ನೀಡಿದ್ದು, ಭ್ರೂಣ ವರ್ಗಾವಣೆ ತಂತ್ರದ ಮೂಲಕ ಉತ್ತಮ ತಳಿಯ ಹಸುಗಳ ಅಭಿವೃದ್ಧಿಗೆ ಸಹ ಮುಂದಾಗಿದೆ. ಪ್ರಸ್ತುತ ರೈತರಿಗೆ ಲೀಟಗೆರ್ಗೆ ಸರಾಸರಿ 39 ರಿಂದ 40.76 ರೂಪಾಯಿ ಪಾವತಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಯೋಜನೆಗಳ ಕುರಿತು ಮಾತನಾಡಿದ ಅವರು, ಗುವಾ ಚಿಲ್ಲಿ ಲಸ್ಸಿ, ನಂದಿನಿ ಸೀಡ್ಸ್ ಮ್ಯಾಜಿಕ್ ಲಾಡು, ಪ್ರೋಟೀನ್ ಪನ್ನೀರ್, ನಂದಿನಿ ಪ್ರೋಟೀನ್ ಪಂಚ್ ಹಾಗೂ ವೆಹ್ ಡ್ರಿಂಕ್ಸ್ಗಳಂತಹ ನೂತನ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ ಎಂದು ಹೇಳಿದರು. ಜೊತೆಗೆ ಮಂಗಳೂರು ಮತ್ತು ಉಡುಪಿ ಡೇರಿಗಳ ಅಗತ್ಯ ನೀರಿನ ಮೂಲ ಖರೀದಿ, ಪನ್ನೀರ್ ಉತ್ಪಾದನೆಗೆ ನೂತನ ಯಂತ್ರಗಳ ಖರೀದಿ, ಉಡುಪಿ ಡೇರಿಯಲ್ಲಿ ಹೊಸ ಆಡಳಿತ ಕಛೇರಿ ನಿರ್ಮಾಣ ಮತ್ತು ವಾರಾಹಿ ಯೋಜನೆಯಿಂದ ನೀರಿನ ಪೈಪ್ಲೈನ್ ಅಳವಡಿಸುವ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉದಯ್ ಕುಮಾರ್, ಸುಚರಿತ ಶೆಟ್ಟಿ, ಜಯರಾಮ್ ರೈ ಹಾಗೂ ಬೆಳವು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments