ಹಾಸ್ಟೆಲ್‍ಗಳಲ್ಲಿ ಸೌಲಭ್ಯ ಖಾತರಿಪಡಿಸಿಕೊಳ್ಳಿ- ಯು ಟಿ ಖಾದರ್

Spread the love

ಹಾಸ್ಟೆಲ್‍ಗಳಲ್ಲಿ ಸೌಲಭ್ಯ ಖಾತರಿಪಡಿಸಿಕೊಳ್ಳಿ- ಯು ಟಿ ಖಾದರ್

ಮಂಗಳೂರು: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಡಿ ನಡೆಸಲ್ಪಡುತ್ತಿರುವ ಹಾಸ್ಟೆಲ್‍ಗಳ ಸುವ್ಯವಸ್ಥೆ ಮತ್ತು ಆಹಾರದ ಗುಣಮಟ್ಟದ ವರದಿ ಹಾಗೂ ಪ್ರಗತಿ ಪರಿಶೀಲನೆಯನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಇಂದು ನಡೆಸಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗಿರಿಜನ ಅಭಿವೃದ್ಧಿ ಯೋಜನೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಜಿಲ್ಲೆಯಲ್ಲಿನ ಹಾಸ್ಟೆಲ್‍ಗಳಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಆಹಾರ ಲಭ್ಯತೆ, ವಿದ್ಯಾರ್ಥಿಗಳ ಕಲಿಕಾ ಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ತಾವು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿಯೂ ಹೇಳಿದರು.

ಆಹಾರ ಪೂರೈಕೆಗೆ ಟೆಂಡರ್ ಮಾಡುವ ರೀತಿ, ಈ ಸಂಬಂಧ ವಿಧಿಸಲಾದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಸಚಿವರು ವಿಚಾರಿಸಿದರು.

ಐಟಿಡಿಪಿ ಯೋಜನೆಯಡಿ ಜಿಲ್ಲೆಯ ಕೊರಗ ಸಮುದಾಯದವರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ ಅವರು, ಈ ಸಮುದಾಯಕ್ಕೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ವೇಳೆ ಸೌಲಭ್ಯ ಲಭ್ಯತೆ ಖಾತರಿ ಪಡಿಸಲು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವ ಬಗ್ಗೆ ಚಿಂತನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 1200 ಕೊರಗ ಸಮುದಾಯದ ಕುಟುಂಬಗಳಿದ್ದು ಅವರಿಗೆ 2,030 ರೂ. ಮೌಲ್ಯದ 14 ರೀತಿಯ ಆಹಾರ ಪದಾರ್ಥಗಳನ್ನು ತಿಂಗಳಿಗೆ ನೀಡಲಾಗುತ್ತಿದೆ ಎಂದು ಐಟಿಡಿಪಿ ಅಧಿಕಾರಿ ಹೇಮಲತಾ ಅವರು ಮಾಹಿತಿ ನೀಡಿದರು. ಈಗಾಗಲೇ ಆರೋಗ್ಯ ಇಲಾಖೆಯನ್ನೊಳಗೊಂಡಂತೆ ವಿವಿಧ ಇಲಾಖೆಗಳ ಜೊತೆಗೂಡಿ ಕೊರಗ ಸಮುದಾಯಕ್ಕೆ ದೊರೆಯುವ ಸೌಲಭ್ಯಗಳನ್ನು ಅವರಿಗೆ ವಿತರಿಸಲಾಗುತ್ತಿದ್ದು ಸಾಕಷ್ಟು ‘ಅರಿವು’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮುಂದಿನ ಹಂತದಲ್ಲಿ ಅವರಿಗೆ ಶಿಕ್ಷಣದ ಬಳಿಕ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಬಲೀಕರಣಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಐಟಿಡಿಪಿ ರಚನೆಯಾದ ಬಳಿಕ ಈ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವಿವರಿಸಿದರು.

ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್, ನಿರುದ್ಯೋಗಿ ಭತ್ಯೆಗಳನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸೌಲಭ್ಯಕ್ಕೆ ಅರ್ಜಿ ಹಾಕಿದವರಿಗೆ ಸೌಲಭ್ಯ ನೀಡುವ ಬದಲು ನಿಜವಾದ ಅರ್ಹರಿಗೆ ಸೌಲಭ್ಯಗಳು ತಲುಪುವಂತಾಗಬೇಕೆಂದು ಸಚಿವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ವಿವಿಧ ನಿಗಮಗಳಿಂದ ಫಲಾನುಭವಿಗಳ ಆಯ್ಕೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಜನವರಿ 15ರೊಳಗೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಾಲಮಿತಿ ಹಾಕಿ ಸಂಬಂಧಪಟ್ಟವರಿಗೆಲ್ಲರಿಗೂ ಪತ್ರ ಬರೆಯಿರಿ ಎಂದು ನಿಗಮದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅರ್ಹರಿಗೆ ಸೌಲಭ್ಯಗಳನ್ನು ನೀಡಲಾಗಿದ್ದು, ಭಾಗ್ಯಲಕ್ಷ್ಮಿ ಬಾಂಡ್ ಬರುವಲ್ಲಿ ವಿಳಂಬವಾಗಿದ್ದರೂ ಗಾಬರಿಯಾಗಬೇಕಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಉದ್ಯೋಗಿನಿ ಯೋಜನೆ ಸೇರಿದಂತೆ ವಿವಿಧ ಸೌಲಭ್ಯಗಳ ಪ್ರಗತಿ ಪರಿಶೀಲಿಸಿದರು.

ಲೇಡಿಗೋಷನ್ ಮತ್ತು ವೆನ್ ಲಾಕ್ ಆಸ್ಪತ್ರೆಗಳ ಅಗತ್ಯವನ್ನು ಆಲಿಸಿದ ಸಚಿವರು, ಆಸ್ಪತ್ರೆಗಳು ಇನ್ನಷ್ಟು ಉತ್ತಮವಾಗಿ ರೋಗಿಗಳಿಗೆ ಸೇವೆ ನೀಡುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ಉಳ್ಳಾಲ ಸೋಮೇಶ್ವರದಲ್ಲಿ ಎಡಿಬಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸವಿವರ ಮಾಹಿತಿಯನ್ನು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳೊಂದಿಗೆ ಪಡೆದರಲ್ಲದೆ ಕ್ರಿಯಾಯೋಜನೆ ಹಂತದಲ್ಲಿರುವ ಯೋಜನೆಗಳ ಸಮಗ್ರ ಮಾಹಿತಿ ನೀಡಲು ಹೇಳಿದರು.

ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿರುವ ರೀತಿಯ ಬಗ್ಗೆ ಮಾಹಿತಿ ಪಡೆದರಲ್ಲದೆ, ಕಳೆದ ಬಾರಿ ಹಿಂದುಳಿಯಲು ಕಾರಣವೇನು ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಿ. ಕೊನೆಯ ಮೂರು ತಿಂಗಳು ಮಕ್ಕಳನ್ನು ಪರೀಕ್ಷೆ ಬರೆಯಲು ಸಜ್ಜುಗೊಳಿಸುವುದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡರು.


Spread the love