ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲ – ಕೆ ವಿಕಾಸ್ ಹೆಗ್ಡೆ
ಕುಂದಾಪುರ: ಭಾರತೀಯ ಜನತಾ ಪಕ್ಷದವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಕೆ ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಧರ್ಮ ಸಂರಕ್ಷಣ ಯಾತ್ರೆ ಕೇವಲ ರಾಜಕೀಯ ಪ್ರೇರಿತ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತ ಬಗ್ಗೆ ಅನಾಮಿಕ ಪೊಲೀಸ್ ಇಲಾಖೆಗೆ ದೂರು ನೀಡಿದಾಗ ಅದರ ತನಿಖೆಗೆ ರಾಜ್ಯ ಸರ್ಕಾರ ಎಸ್ ಐ ಟಿ ರಚನೆ ಮಾಡುತ್ತದೆ ಮತ್ತು ತನಿಖೆ ನಡೆಯುತ್ತಿದೆ. ಆಗ ರಾಜ್ಯ ಸರ್ಕಾರ ಎಸ್ ಐ ಟಿ ರಚನೆ ಮಾಡಿದ್ದನ್ನು ಸ್ವಾಗತಿಸಿದ ಬಿಜೆಪಿ ನಾಯಕರುಗಳು ಈಗ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವುದು ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು. ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕ್ಷೇತ್ರದ ಬಗ್ಗೆ ಭಯ, ಭಕ್ತಿ, ನಂಬಿಕೆ ಹಾಗೂ ಗೌರವ ನಮಗೆ ಇದೆ ಹಾಗೂ ಯಾವತ್ತೂ ಇರುತ್ತದೆ.
ಬಿಜೆಪಿಯವರು ಏನು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ. ಧರ್ಮ, ದೇವರ ವಿಚಾರದಲ್ಲಿ ಬಿಜೆಪಿಯವರದ್ದು ಬೂಟಾಟಿಕೆ ಅಷ್ಟೇ, ಕೇವಲ ರಾಜಕೀಯ ಲಾಭಕ್ಕೆ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಇನ್ನು ಕೆಲವು ಒಂದಷ್ಟು ಮಂದಿ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಮುಂದೆ ಇಟ್ಟುಕೊಂಡು ಶಾಸಕರೋ ಇಲ್ಲಾ ಸಂಸದರೋ ಆಗುವ ಹವಣಿಕೆಯಲ್ಲಿ ಇದ್ದಾರೆ. ಧರ್ಮ, ದೇವರ ವಿಚಾರದಲ್ಲಿ ಬಿಜೆಪಿ ನಾಯಕರುಗಳ ಹೇಳಿಕೆಗಳೆಲ್ಲವೂ ಕೇವಲ ರಾಜಕೀಯ ಲಾಭದ ಉದ್ದೇಶಕ್ಕೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ