ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ ಸಾವು

Spread the love

ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ ಸಾವು

ಚೆನೈ: ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹೆಲ್ಮಟ್ ಧರಿಸಿಲ್ಲವೆಂದು ಅವರನ್ನು ಟ್ರಾಫಿಕ್ ಪೊಲೀಸ್ ಚೇಸ್ ಮಾಡಿಕೊಂಡು ಹೋದ ನಂತರ ಹಿಂಬದಿ ಕುಳಿತಿದ್ದ ಗರ್ಭಿಣಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬುಧವಾರದಂದು ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಕಾಮರಾಜ್ ಅವರನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಪೊಲೀಸರ ವರ್ತನೆಯನ್ನು ಖಂಡಿಸಿ ಸಾವರ್ಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಏನಿದು ಘಟನೆ?: ಮೃತ ಮಹಿಳೆ ಮತ್ತು ಪತಿ ರಾಜಾ ಹೆಲ್ಮೆಟ್ ಧರಿಸದೆ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದರು. ತಿರುವೆರಂಬೂರು ಸಮೀಪ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ಚೆಕ್ ಪಾಯಿಂಟ್ ನಲ್ಲಿ ರಾಜಾ ಬೈಕ್ ನಿಲ್ಲಿಸದೇ ಮುಂದೆ ಹೋದರು. ಆಗ ಟ್ರಾಫಿಕ್ ಪೊಲೀಸ್ ಕಾಮರಾಜ್ ತನ್ನ ಬೈಕ್ ನಲ್ಲಿ ಆ ದಂಪತಿಯನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ರಾಜಾ ಬೈಕ್‍ನ ಸಮತೋಲನ ಕಳೆದುಕೊಂಡಿದ್ದು, ಹಿಂಬದಿ ಕುಳಿತಿದ್ದ ರಾಜಾ ಅವರ ಪತ್ನಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ರಾಜಾ ಅವರಿಗೂ ಗಂಭೀರ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು, ಟ್ರಾಫಿಕ್ ಪೊಲೀಸ್ ಆ ಮಹಿಳೆಯನ್ನು ಒದ್ದದ್ದೇ ಅವರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಮಹಿಳೆ ಬಿದ್ದ ನಂತರ ಮತ್ತೊಂದು ವಾಹನ ಅವರ ಮೇಲೆ ಹರಿದು ಸಾವನ್ನಪ್ಪಿದ್ದಾರೆಂದು ಹೇಳುತ್ತಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಕಾಮರಾಜ್ ಕುಡಿದಿದ್ದರೆಂದು ಕೆಲವು ಸ್ಥಳೀಯರು ಆರೋಪಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ತಿರುಚಿಯ ಹಿರಿಯ ಅಧಿಕಾರಿ ಈ ಕುರಿತು ಮಾತನಾಡಿದ್ದು, ಆ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಟ್ರಾಫಿಕ್ ಪೊಲೀಸ್ ಈ ರೀತಿಯಾಗಿ ಅವರನ್ನು ಚೇಸ್ ಮಾಡಬಾರದಿತ್ತು. ಇದರ ಬಗ್ಗೆ ತನಿಖೆ ಮಾಡುತ್ತೇವೆಂದು ತಿಳಿಸಿದ್ದಾರೆ.

ಈ ಘಟನೆ ಸಾರ್ವಜನಿಕರನ್ನು ಕೆರಳಿಸಿದ್ದು, ಟ್ರಾಫಿಕ್ ಪೊಲೀಸ್ ರನ್ನು ಬಂಧಿಸಬೇಕೆಂದು ಒತ್ತಾಯಿಸಿ ನೂರಾರು ಜನರು ತಿರುವೆರಂಬೂರ್ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.


Spread the love