ಹೊಸ ವರ್ಷಾಚರಣೆ–2026: ನಿಯಮ ಉಲ್ಲಂಘನೆಗೆ ಕಠಿಣ ಕ್ರಮ – ಪೊಲೀಸ್ ಇಲಾಖೆ ಎಚ್ಚರಿಕೆ
ಮಂಗಳೂರು: 2026ರ ಹೊಸ ವರ್ಷಾಚರಣೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯ ವತಿಯಿಂದ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮ ಆಯೋಜಕರು ಹಾಗೂ ಸಾರ್ವಜನಿಕರು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಅನುಮತಿ ಪಡೆಯದೆ ಸಾರ್ವಜನಿಕವಾಗಿ ಯಾವುದೇ ರೀತಿಯ ಆಚರಣೆಗಳಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾಗದಂತೆ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ವಾಹನ ಚಾಲನೆ, ವೀಲಿಂಗ್, ಅಸಭ್ಯ ವರ್ತನೆ ಸೇರಿದಂತೆ ಸಾರ್ವಜನಿಕ ಕಿರುಕುಳದ ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆ ನಗರದಾದ್ಯಂತ ಭದ್ರತಾ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಿಸಿಆರ್ ವಾಹನಗಳು, ಹೈವೇ ಪೆಟ್ರೋಲ್ ವಾಹನಗಳು, ಪಿಕೆಟ್ ಪಾಯಿಂಟ್ಗಳು, ಚೆಕ್ಪೋಸ್ಟ್ಗಳು ಹಾಗೂ ರೌಂಡ್ಸ್ ಕರ್ತವ್ಯಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್ಪಿ ತುಕಡಿಗಳು, ಎಫ್ಎಎಫ್ ತುಕಡಿ ಹಾಗೂ ಸಿಎಆರ್ ತುಕಡಿಗಳನ್ನೂ ನಿಯೋಜಿಸಲಾಗಿದೆ.
ಸಾರ್ವಜನಿಕರು ಯಾವುದೇ ತುರ್ತು ದೂರುಗಳಿಗಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದ್ದು, 112 ಸಂಪರ್ಕ ಸಾಧ್ಯವಾಗದಿದ್ದಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0824-2220800 ಅಥವಾ 9480802321 ಗೆ ಕರೆ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













