15 ದಿನದಲ್ಲಿ ಹೆದ್ದಾರಿ ದುರಸ್ತಿಯಾಗದಿದ್ದರೆ ಟೋಲ್ ಬಂದ್; ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ

Spread the love

15 ದಿನದಲ್ಲಿ ಹೆದ್ದಾರಿ ದುರಸ್ತಿಯಾಗದಿದ್ದರೆ ಟೋಲ್ ಬಂದ್; ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ

ಉಡುಪಿ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹೊಂಡಗುಂಡಿ, ವಿಳಂಬ ಕಾಮಗಾರಿಯಿಂದ ಅವ್ಯವಸ್ಥೆ ಆಗರವಾಗಿದ್ದು, 15 ದಿನದ ಒಳಗೆ ದುರಸ್ತಿ ಮಾಡದಿದ್ದರೆ ಟೋಲ್ ಬಂದ್ ಮಾಡಲಾಗುವುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಅವರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಯಿತು.

ಹೆದ್ದಾರಿ ಅವ್ಯವಸ್ಥೆ, ಹೊಂಡ-ಗುಂಡಿಗಳು, ಮೇಲ್ಸೇತುವೆ ನಿರ್ಮಾಣ ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತ್ತಿದೆ. ರಸ್ತೆ ವಿಭಜಕದಲ್ಲಿ ನೀರು ಹರಿಯುವ ಜಾಗದ ಮೂಲಕ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದರಿಂದ ನಿರಂತರ ಅಪಘಾತವಾಗುತ್ತಿದೆ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೈಂದೂರಿನ ಒತ್ತಿನೆಣೆಯಲ್ಲಿ ಭೂ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಅಡೆತಡೆ ತಕ್ಷಣ ಸರಿಪಡಿಸಬೇಕು ಎಂದು ಶಾಸಕ ಸುಕುಮಾರ ಶೆಟ್ಟಿ ಒತ್ತಾಯಿಸಿದರು. ಕುಂದಾಪುರ ಶಾಸ್ತ್ರಿ ಸರ್ಕಲ್‌ನ ಮೇಲ್ಸೇತುವೆ ವಿಳಂಬ ಮತ್ತು ಶಾಸ್ತ್ರಿ ಸರ್ಕಲ್‌ನಿಂದ ವಿನಾಯಕ ಟಾಕೀಸ್‌ವರೆಗೆ ರಸ್ತೆ ಕಳಪೆ ಕಾಮಗಾರಿ ಬಗ್ಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ದುರಸ್ತಿಗೆ ಆಗ್ರಹಿಸಿದರು.

ಕರಾವಳಿ ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿ ವಿಳಂಬ ಮತ್ತು ಕಾಪು ರಾಷ್ಟ್ರೀಯ ಹೆದ್ದಾರಿ ಹಾಗೂ ಪಡುಬಿದ್ರಿ ಬಳಿ ರಸ್ತೆ ದುರವಸ್ಥೆಯಿಂದ ಗಂಟೆಗಟ್ಟಲೆ ವಾಹನಗಳ ಕ್ಯೂ ನಿಲ್ಲುವಂತಾಗಿದೆ. ಕ್ರಮ ತೆಗೆದುಕೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿಕೊಂಡು ಟೋಲ್ ಬಂದ್ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಮೂರು ದಿನದಲ್ಲಿ ಹೊಂಡ ಮುಚ್ಚುವ ಭರವಸೆ: ಮೂರು ದಿನಗಳವರೆಗೆ ರಸ್ತೆಯ ಹೊಂಡ ಮುಚ್ಚಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಆಗಸ್ಟ್ 10ರ ಒಳಗೆ ವಿಭಜಕಗಳ ನಡುವಿನ ಕಂದಕಕ್ಕೆ ರಕ್ಷಣಾ ಬೇಲಿ ಅಥವಾ ದ್ವಿ-ಚಕ್ರ ವಾಹನ ಚಲಿಸದಂತೆ ತಡೆಗೋಡೆ ನಿರ್ಮಾಣ ಮಾಡುತ್ತೇವೆ ಎಂದು ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದರು. ಕುಂದಾಪುರ ಮೇಲ್ಸೇತುವೆ ಹೆಚ್ಚುವರಿ ಪ್ರಸ್ತಾವನೆಯಾದ್ದರಿಂದ ಬರುವ ಮಾರ್ಚ್ ಒಳಗೆ ಕಾಮಗಾರಿ ಮುಗಿಸುತ್ತೇವೆ. ಉಡುಪಿಯ ಕರಾವಳಿ ಜಂಕ್ಷನ್‌ನಲ್ಲಿರುವ ಮೇಲ್ಸೇತುವೆ 3 ತಿಂಗಳಲ್ಲಿ ಮುಗಿಯಲಿದೆ ಎಂದ ಅಧಿಕಾರಿಗಳು ಕಾಪು ಮತ್ತು ಪಡುಬಿದ್ರಿಯಲ್ಲಿ ರಸ್ತೆಯ ರಿಪೇರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶಿವಾನಂದ್ ಕಾಪಶಿ ಉಪಸ್ಥಿತರಿದ್ದರು.


Spread the love