ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಉದ್ಘಾಟನೆ

Spread the love

ಉಜಿರೆ: ವಿಶ್ವದೆಲ್ಲೆಡೆ ಇಂದು ಹಿಂಸೆ ತಾಂಡವವಾಡುತ್ತಿದೆ. ಮನುಷ್ಯ ಪ್ರತಿಕ್ಷಣವನ್ನೂ ಭಯ, ಆತಂಕದಿಂದ ಕಳೆಯುತ್ತಿದ್ದಾನೆ. ಜಾತಿ, ಮತ, ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಅನ್ಯಾಯ, ಅತ್ಯಾಚಾರ, ಹಿಂಸೆ ನಿತ್ಯ ನಿರಂತರ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಹಿಂಸಾ ಪ್ರವೃತ್ತಿ ಮಹಾ ಪಾಪದ ಕೆಲಸವಾಗಿದೆ. ಸರ್ವಧರ್ಮ ಸಮನ್ವಯದಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯ ನೆಲೆಸುತ್ತದೆ ಎಂದು ಸಹಕಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನದ ಎಂಬತ್ತಮೂರನೆ ಅಧಿವೇಶನವನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಸಾವiರಸ್ಯ ಮತತು ಸಹಿಷ್ಣುತೆ ಭಾರತದ ಪರಂಪರೆಯಾಗಿದ್ದು ಇಲ್ಲಿ ಅಸಹಿಷ್ಣುತೆಗೆ ಆವಕಾಶವೇ ಇಲ್ಲ. ಯಾವುದೇ ಧರ್ಮ, ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳ ಸಾರ ಅಹಿಂಸೆ, ಶಾಂತಿ, ಸಾಮರಸ್ಯ ಮತ್ತು ಸಹಿಷ್ಣುತೆಯೇ ಆಗಿದೆ. ಪ್ರತಿ ಧರ್ಮವು ತನ್ನದೇ ಆದ ತತ್ವ ಹಾಗೂ ಸಿದ್ಧಾಂತ ಹೊಂದಿದ್ದರೂ ಸಾಮಾಜಿಕ ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯೇ ಎಲ್ಲಾ ಧರ್ಮಗಳ ಧ್ಯೇಯವಾಗಿದೆ.

ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧಾರ್ಮಿಕ ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಜೈನ ಧರ್ಮದ ಭಗವಾನ್ ಮಹಾವೀರ, ಗೌತಮ ಬುದ್ಧ, ಸಾಧು-ಸಂತರು, ದಾಸರು, ಶರಣರು ಅಹಿಂಸೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿದರು. ಮಾನವ ಧರ್ಮವೇ ಶ್ರೇಷ್ಠ ಧರ್ಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರು ಸ್ವಾವಲಂಬಿಗಳಾಗಿದ್ದಾರೆ. ಈ ಭಾಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಜನರು ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಹರಿದ್ವಾರದ ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಮಾತನಾಡಿ, ಅಹಿಂಸೆಯೇ ಶ್ರೇಷ್ಠ ಧರ್ಮವಾಗಿದೆ. ಹಿಂಸೆ ಮಹಾಪಾಪವಾಗಿದೆ ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ನಾಗಾಲೋಟದಲ್ಲಿ ಪ್ರಗತಿಯಾಗುತ್ತಿದ್ದರೂ ಬಡತನ, ಅಪೌಷ್ಠಿಕತೆ, ಮಕ್ಕಳ ಶೋಷಣೆ, ಲೈಂಗಿಕ ಕಿರುಕುಳದಂತಹ ಅಮಾನವೀಯ ಪ್ರಕರಣಗಳು ಇಂದು ಅಲ್ಲಲ್ಲಿ ನಡೆಯುತ್ತಿರುವುದು ಖೇದಕರವಾಗಿದೆ. ಭಾರತೀಯರಲ್ಲಿ ಸಹಿಷ್ಣುತೆ ಧಾರಾಳವಾಗಿವೆ. ಪ್ರೀತಿ-ವಿಶ್ವಾಸದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಬಹುದು. ಭಗವಾನ್ ಬುದ್ಧ, ಮಹಾವೀರ, ಬಾಹುಬಲಿ ಭೋದಿಸಿದ ತ್ಯಾಗ ಮತ್ತು ಅಹಿಂಸೆಯಿಂದ ಶಾಶ್ವತ ಸುಖ-ಶಾಂತಿ ಮತ್ತು ನೆಮ್ಮದಿ ಪಡೆಯಬಹುದು. ತ್ಯಾಗ, ಸಹನೆ, ಸಂಯಮದಿಂದ ಸೌಹಾರ್ದಯುತ ಜೀವನ ನಡೆಸಬಹುದು. ಉದಾರ ಮನಸ್ಸು ಉಳ್ಳವರಿಗೆ ಇಡೀ ವಿಶ್ವವೇ ಕುಟುಂಬವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿವಿಧ ಧರ್ಮಗಳಲ್ಲಿರುವ ಭಿನ್ನತೆಯಲ್ಲಿ ಏಕತೆಯನ್ನು ಗುರುತಿಸಿ ಸಾಮರಸ್ಯ ಮೂಡಿಸುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶವಾಗಿದೆ. ಧರ್ಮಗಳೊಳಗೆ ಪರಸ್ಪರ ಸಾಮರಸ್ಯ ಇದ್ದು ಉತ್ತಮ ಸಂಬಂಧಗಳು ಬೆಳೆಯಬೇಕು. ಅವರವರ ಧರ್ಮವನ್ನು ಅರಿತುಕೊಂಡು ಇತರ ಧರ್ಮಗಳ ಬಗ್ಯೆ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣದಲ್ಲಿ ಹೇಳಿದರು.
ವಿವಿಧ ಧರ್ಮಗಳ ಬಗ್ಯೆ ಪರಸ್ಪರ ಅರಿವು ಉಂಟಾದಾಗ ನಮ್ಮ ಚಿಂತನೆಗಳು ವಿಶಾಲವಾಗುತ್ತವೆ. ಕುತೂಹಲ ಹೆಚ್ಚಿದಷ್ಟು ಅಧ್ಯಯನಕ್ಕೆ ಅವಕಾಶವಾಗುತ್ತದೆ. ಅಧ್ಯಯನ ಮಾಡಿದಷ್ಟು ವಿಮರ್ಶೆಗಳು ಆಗುತ್ತವೆ. ಧರ್ಮಗಳೊಳಗೆ ಸಾಮರಸ್ಯ ಅಂದರೆ ವಿವಿಧ ಧರ್ಮಗಳಲ್ಲಿರುವ ಅಂತರಂಗ ಸತ್ಯವನ್ನು ಅರಿತುಕೊಂಡು ಅದರಲ್ಲಿದ್ದ ಸಿಹಿಯನ್ನು ತೆಗೆದು ಹಂಚಿಕೊಳ್ಳುವುದು. ಎಲ್ಲಾ ಧರ್ಮಗಳು ಕೂಡಾ ಭಗವಂತನ ಅಸ್ತಿತ್ವವನ್ನು ಒಪ್ಪುವುದರ ಜೊತೆಗೆ ಮಾನವನು ಧರ್ಮ ಮಾರ್ಗದಲ್ಲಿ ನಡೆದು ಸುಖಿಯಾಗಿರಬೇಕು. ಇತರರನ್ನೂ ಸುಖಿಯಾಗಿಡಬೇಕು ಎಂದು ಪ್ರತಿಪಾದಿಸಿವೆ.
ಧರ್ಮ, ಅರ್ಥ ಮತ್ತು ಕಾಮವನ್ನು ಇತಿ-ಮಿತಿಯಲ್ಲಿ ಸಮಯೋಚಿತವಾಗಿ ಸರ್ವರಿಗೂ ಮಾನ್ಯವಾಗುವ ರೀತಿಯಲ್ಲಿ ಬಳಸಿದರೆ ಲೋಕ ಕಲ್ಯಾಣವಾಗುತ್ತದೆ. ಇಹಲೋಕದ ಸತ್‍ಚಿಂತನೆ, ಸತ್ಕರ್ಮಗಳಲ್ಲಿ ಮುಕ್ತಿಯ ಬೀಜ ಅಡಗಿದೆ.
ಎಲ್ಲಾ ಧರ್ಮಗಳಲ್ಲಿ ಗುಂಪುಗಳು, ಒಳಭೇದಗಳಿರುತ್ತವೆ. ಈ ಭಿನ್ನತೆಯಲ್ಲಿ ಏಕತೆಯನ್ನು ಗುರುತಿಸುವುದು ಮುಖ್ಯವಾದ ಕೆಲಸವಾಗಿದೆ. ಸರ್ವಧರ್ಮ ಸಮ್ಮೇಳನದ ಮೂಲಕ ಹೇಗೆ ಸಾಮರಸ್ಯದ ಬದುಕನ್ನು ರೂಪಿಸಬಹುದು ಎಂಬುದು ಸಮ್ಮೇಳನದ ಉದ್ದೇಶವಾಗಿದೆ ಹೊರತು ಪ್ರತ್ಯೇಕತೆಯನ್ನು ಗುರುತಿಸುವುದಲ್ಲ ಎಂದು ಅವರು ಹೇಳಿದರು.
ಧಾರ್ಮಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದಲೇ 1933 ರಲ್ಲಿ ಅಂದಿನ ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಪ್ರಾರಂಭಿಸಿದರು. ಬಳಿಕ ಪ್ರತೀ ವರ್ಷವೂ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ ಎಂದು ಹೆಗ್ಗಡೆಯವರು ಹೇಳೀದರು.
“ಪಾರ್ಸಿ ಧರ್ಮದಲ್ಲಿ ಸಮನ್ವಯ ದೃಷ್ಟಿ” ಬಗ್ಯೆ ಬೆಂಗಳೂರಿನ ಶೆರಿಯಾರ್ ಡಿ. ವಕೀಲ್, “ಜೈನ ಧರ್ಮದಲ್ಲಿ ಸಮನ್ವಯ ದೃಷ್ಟಿ” ಬಗ್ಯೆ ಮದ್ರಾಸ್ ವಿ.ವಿ.ಯ ಡಾ. ತಮಿಳ್ ಸೆಲ್ವಿ ಮತ್ತು “ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ” ಬಗ್ಯೆ ಹಾಸನದ ಪ್ರೊ. ಸೈಯ್ಯದ್ ಶಹಾಬುದ್ದೀನ್ ಉಪನ್ಯಾಸ ನೀಡಿದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಪಿ. ಸಂಪತ್ ಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಡಾ. ಎಲ್.ಎಚ್. ಮಂಜುನಾಥ್ ಧನ್ಯವಾದವಿತ್ತರು.
ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.


Spread the love