2019 ಲೋಕಸಭಾ ಚುನಾವಣೆ : ಕಾಂಗ್ರೆಸ್ ನಿಂದ ಶಕ್ತಿ ಆಪ್ ಬಿಡುಗಡೆ

Spread the love

2019 ಲೋಕಸಭಾ ಚುನಾವಣೆ : ಕಾಂಗ್ರೆಸ್ ನಿಂದ ಶಕ್ತಿ ಆಪ್ ಬಿಡುಗಡೆ

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಕಾಂಗ್ರೆಸ್ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದೊಂದಿಗೆ ಶಕ್ತಿ ಆಪ್ ನ್ನು ಇಂದು ಬಿಡುಗಡೆಗೊಳಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಶಕ್ತಿ ಆಪ್ ಬಿಡುಗಡೆಗೊಳಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಚಿದಂಬರಂ, ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅವರಿಂದ ಪ್ರತಿಕ್ರಿಯೆ ಪಡೆಯಲು ಈ ಆಪ್ ಬಿಡುಗಡೆಗೊಳಿಸಲಾಗಿದೆ .ಪ್ರತಿಯೊಂದು ಬೂತ್ ನಲ್ಲೂ ಸಣ್ಣದಾದಂತಹ ಹೋರಾಟ ಇದ್ದೆ ಇರುತ್ತದೆ. ಎಲ್ಲಾ ಬೂತ್ ನಲ್ಲಿಯೂ ಆಗತ್ಯವಾದಷ್ಟು ಜನ ಇರಬೇಕಾಗುತ್ತದೆ.ಸೂಕ್ಷ್ಮ ನಿರ್ವಹಣೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಗಾಗಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಕಾರ್ಯಕರ್ತರು ನೊಂದಾಯಿಸಬೇಕು. ತಮ್ಮ ಮಗ, ಮಗಳು, ಸ್ನೇಹಿತರು ಮತ್ತು ಸುತ್ತಮುತ್ತಲಿನ ನೆರೆಹೊರೆಯವರನ್ನು ವ್ಯಾಪಕ ರೀತಿಯಲ್ಲಿ ಪಕ್ಷದ ಸದಸ್ಯರಾಗಿ ನೊಂದಾಯಿಸುವಂತೆ ಚಿದಂಬರಂ ಕಾರ್ಯಕರ್ತರಿಗೆ ಕರೆ ನೀಡಿದರು.

ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಶಕ್ತಿ ಆಪ್ ವಿಶೇಷ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಆಪ್ ಮೂಲಕ ವಿಡಿಯೋ, ಪೋಟೋಗಳು, ದಾಖಲೆಗಳನ್ನು ಹಂಚಿಕೊಳ್ಳಬಹುದಲ್ಲದೆ, ರಾಹುಲ್ ಗಾಂಧಿ ಅವರಿಗೆ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ.

ಕಳೆದ ತಿಂಗಳು ಹೈದ್ರಾಬಾದ್, ವಾರಂಗಲ್, ಹನಮ್ ಕೊಂಡ ಮತ್ತಿತರ ಕಡೆಗಳಲ್ಲಿ ಶಕ್ತಿ ಆಪ್ ಪ್ರಾರಂಭಿಸಲಾಗಿತ್ತು.


Spread the love