2024-25ನೇ ಸಾಲಿನಲ್ಲಿ ಮಹಾಲಕ್ಷ್ಮೀ ಬ್ಯಾಂಕಿಗೆ ರೂ. 21.40 ಕೋಟಿ ಲಾಭ : ಯಶ್‌ಪಾಲ್ ಎ. ಸುವರ್ಣ
ಉಡುಪಿ: ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2024-25ನೇ ಸಾಲಿನಲ್ಲಿ ರೂ. 1063 ಕೋಟಿ ವ್ಯವಹಾರ ನಡೆಸಿ ರೂ. 21.40 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳನ್ನು ಹೊಂದಿದ್ದು 50,000 ಗ್ರಾಹಕರ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2024-25ನೇ ಸಾಲಿನಲ್ಲಿ ರೂ.11,457 ಕೋಟಿ ಒಟ್ಟು ವಹಿವಾಟು ನಡೆಸಿ ರೂ. 604 ಕೋಟಿ ಠೇವಣಿ, ರೂ.459 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ರೂ.39.93 ಕೋಟಿ ಪಾಲು ಬಂಡವಾಳದೊಂದಿಗೆ ರೂ.9.15 ಕೋಟಿ ನಿವ್ವಳ ಲಾಭ ಗಳಿಸಿ ಶೂನ್ಯ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ.
ಕಳೆದ 15 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಅತೀ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದು, ಸತತವಾಗಿ 9 ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ ಪ್ರತಿಷ್ಟಿತ ಪ್ರಶಸ್ತಿ “ಸಾಧನ ಪ್ರಶಸ್ತಿ” ಬ್ಯಾಂಕ್ ಮುಡಿಗೇರಿಸಿಕೊಂಡಿದೆ.
ಪ್ರಸ್ತುತ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯನ್ನು ಒಳಗೊಂಡಿರುತ್ತದೆ. ಬಾಡಿಗೆ ಕಟ್ಟಡದಲ್ಲಿರುವ ಉಡುಪಿ ಶಾಖೆಯನ್ನು ಶೀಘ್ರದಲ್ಲಿಯೇ ನಗರದ ಹೃದಯ ಭಾಗದಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು,
ರಾಷ್ಟ್ರೀಕತ ಬ್ಯಾಂಕಿನಲ್ಲಿ ದೊರಕುವ ಎಲ್ಲಾ ಆಧುನಿಕ ಸೌಲಭ್ಯಗಳು ಲಭ್ಯವಿದ್ದು, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಸೇವೆ ಸಹಿತ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್‌ನ್ನು ಅಳವಡಿಸಿಕೊಂಡಿದ್ದು, ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ದೃಷ್ಟಿಯಲ್ಲಿ ಯುಪಿಐ ಸೇವೆಯು ಲಭ್ಯವಿದ್ದು, ಸುಮಾರು 5 ಸಾವಿರ ಗ್ರಾಹಕರು ಇದರ ಸದುಪಯೋಗವನ್ನು ಪಡೆದಿರುತ್ತಾರೆ.
ಪ್ರತಿವರ್ಷದಂತೆ ಬ್ಯಾಂಕಿನ ವತಿಯಿಂದ ಸುಮಾರು 50 ಲಕ್ಷ ವೆಚ್ಚದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 1,500 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲಾಗಿದ್ದು, ಉಚ್ಚಿಲ ದಸರಾ ಮಹೋತ್ಸವದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ತೃತೀಯ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಅಧ್ಯಕ್ಷರಾದ ಯಶ್‌ಪಾಲ್ ಎ. ಸುವರ್ಣರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.