ಉಡುಪಿ ಜಿಲ್ಲೆಯಲ್ಲಿ ಈ ಬಾರಿ 492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ; ಬಂದೋಬಸ್ತಿಗೆ 996 ಪೊಲೀಸರ ನಿಯೋಜನೆ

Spread the love

ಉಡುಪಿ ಜಿಲ್ಲೆಯಲ್ಲಿ ಈ ಬಾರಿ 492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ; ಬಂದೋಬಸ್ತಿಗೆ 996 ಪೊಲೀಸರ ನಿಯೋಜನೆ

ಉಡುಪಿ: ಗಣೇಶ ಚತುರ್ಥಿ–2026ರ ಅಂಗವಾಗಿ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ನಡೆಯುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ನಡೆಯಲಿದ್ದು, ಈ ಪೈಕಿ 415 ಸಾಮಾನ್ಯ, 74 ಸೂಕ್ಷ್ಮ ಹಾಗೂ 3 ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಸೆಪ್ಟೆಂಬರ್ 14ರಿಂದ 29ರವರೆಗೆ ವಿವಿಧ ದಿನಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆಪ್ಟೆಂಬರ್ 14ರಂದು 211, ಸೆಪ್ಟೆಂಬರ್ 15ರಂದು 108, ಸೆಪ್ಟೆಂಬರ್ 16ರಂದು 114, ಸೆಪ್ಟೆಂಬರ್ 17ರಂದು 13 ಹಾಗೂ ಸೆಪ್ಟೆಂಬರ್ 18ರಂದು 29 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆಪ್ಟೆಂಬರ್ 19ರಂದು 4, ಸೆಪ್ಟೆಂಬರ್ 20ರಂದು 5, ಸೆಪ್ಟೆಂಬರ್ 22ರಂದು 1, ಸೆಪ್ಟೆಂಬರ್ 23ರಂದು 1, ಸೆಪ್ಟೆಂಬರ್ 24ರಂದು 1, ಸೆಪ್ಟೆಂಬರ್ 25ರಂದು 2, ಸೆಪ್ಟೆಂಬರ್ 26ರಂದು 1 ಹಾಗೂ ಸೆಪ್ಟೆಂಬರ್ 29ರಂದು 2 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆಪ್ಟೆಂಬರ್ 21, 27 ಮತ್ತು 28ರಂದು ಯಾವುದೇ ವಿಸರ್ಜನೆ ಕಾರ್ಯಕ್ರಮ ಇರುವುದಿಲ್ಲ.
ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಗದಿತ ಮಾರ್ಗಗಳು ಹಾಗೂ ಸ್ಥಳಗಳನ್ನು ಗುರುತಿಸಲಾಗಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿದೆ.

ಗಣೇಶೋತ್ಸವವು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 22 ಶಾಂತಿ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಸಾರ್ವಜನಿಕರು, ಗಣೇಶೋತ್ಸವ ಸಮಿತಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಮನ್ವಯ ಸಾಧಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. 2026ನೇ ಸಾಲಿನ ದಾಖಲೆಗಳ ಪ್ರಕಾರ 611 ಮಂದಿಯ ವಿರುದ್ಧ ಮುನ್ನೆಚ್ಚರಿಕಾ ಕ್ರಮ ಜರುಗಿಸಲಾಗಿದ್ದು, 487 ಮಂದಿಯನ್ನು ಬಾಂಡ್ ಓವರ್ ಮಾಡಲಾಗಿದೆ.

ಗಣೇಶೋತ್ಸವದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣಕ್ಕಾಗಿ ಒಟ್ಟು 996 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವರಲ್ಲಿ 3 ಎಎಸ್ಪಿ/ಡಿಎಸ್ಪಿ, 7 ಸಿಐ, 37 ಪಿಎಸ್ಐ, 83 ಎಎಸ್ಐ, 680 ಹೆಡ್ ಕಾನ್ಸ್ಟೆಬಲ್, ಪೊಲೀಸ್ ಕಾನ್ಸ್ಟೆಬಲ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ, 20 ಡಿಎಆರ್ ಸಿಬ್ಬಂದಿ, 3 ಕೆಎಸ್ಆರ್ಪಿ ತುಕಡಿಗಳು ಹಾಗೂ 163 ಗೃಹರಕ್ಷಕ ಸಿಬ್ಬಂದಿ ಸೇರಿದ್ದಾರೆ. ಇದರೊಂದಿಗೆ 12 ಪಿಎ ವ್ಯವಸ್ಥೆಗಳು ಹಾಗೂ 3 ಡ್ರೋನ್ಗಳನ್ನು ಸಹ ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಗಣೇಶೋತ್ಸವ ಹಾಗೂ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಆಚರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳಿಗೆ ಮನವಿ ಮಾಡಿದೆ. ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನಿಗದಿಪಡಿಸಿದ ಸ್ಥಳ ಮತ್ತು ಮಾರ್ಗಗಳಲ್ಲಿಯೇ ನಡೆಸಬೇಕು. ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವುದರೊಂದಿಗೆ, ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗದಂತೆ ಸಹಕರಿಸಬೇಕು ಎಂದು ತಿಳಿಸಿದೆ.

ಯಾವುದೇ ರೀತಿಯ ಪ್ರಚೋದನಕಾರಿ ಘೋಷಣೆ, ಅಹಿತಕರ ಘಟನೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ, ಜಿಲ್ಲೆಯ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments