ಕಾಂಗ್ರೆಸ್ ಕಚೇರಿ ಟರ್ಕಿಯಲ್ಲಿದೆಯೇ ಎಂದು ಪ್ರಶ್ನಿಸಿದ ಅಮಿತ್ ಮಾಳವೀಯ, ಅರ್ನಬ್ ಗೋಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಕಚೇರಿ ಟರ್ಕಿಯಲ್ಲಿದೆ ಎಂದು ಸುಳ್ಳು ಮತ್ತು ಅವಹೇಳನಕಾರಿ ಮಾಹಿತಿ ಪ್ರಸಾರ ಮಾಡಿದ ಆರೋಪದಲ್ಲಿ ಬಿಜೆಪಿಯ ಅಮಿತ್ ಮಾಳವೀಯ ಹಾಗೂ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಪಕ್ಷ ಪೊಲೀಸ್ ಪ್ರಕರಣ ದಾಖಲಿಸಿದೆ.
ಸಂವಿಧಾನದತ್ತ ಅಧಿಕಾರವಾದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಕೂಡಾ ಆಪಾದಿಸಲಾಗಿದೆ. ಪಕ್ಷದ ವರ್ಚಸ್ಸಿಗೆ ಕಳಂಕ ತರುವ ದುರುದ್ದೇಶದ ಪ್ರಯತ್ನ ಇದಾಗಿದೆ. ದೇಶದ ಭದ್ರತೆಯನ್ನು ಕಡೆಗಣಿಸಿ ಅರಾಜಕತೆಯನ್ನು ಸೃಷ್ಟಿಸುವ ಪ್ರಯತ್ನ ಹಾಗೂ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ ಎಂದು ಕಾಂಗ್ರೆಸ್ ಕಾನೂನು ವಿಭಾಗ ಎಕ್ಸ್ ಪೋಸ್ಟ್ ನಲ್ಲಿ ಆಕ್ಷೇಪಿಸಿದೆ. ಈ ಬಗ್ಗೆ ಪಕ್ಷ ಮೌನವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
“ಈ ವಿಚಾರದಲ್ಲಿ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ; ನಮ್ಮ ಪಕ್ಷದ ವಿರುದ್ಧ ಅಥವಾ ನಾಯಕತ್ವದ ವಿರುದ್ಧ ಸುಳ್ಳು ಸುದ್ದಿ ಹರಡುವ ಯಾವುದೇ ಪ್ರಯತ್ನದ ವಿರುದ್ಧ ಕಾನೂನು ಹಾಗೂ ರಾಜಕೀಯ ಪ್ರತಿಕ್ರಿಯೆ ನೀಡಲಾಗುತ್ತದೆ” ಎಂದು ವಿವರಿಸಲಾಗಿದೆ.
ಟರ್ಕಿಯ ಇಸ್ತಾಂಬುಲ್ ಕಾಂಗ್ರೆಸ್ ಸೆಂಟರನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಕಚೇರಿ ಎಂದು ಬಿಂಬಿಸುವ ಪ್ರಯತ್ನವನ್ನು ಮಾಳವೀಯ ಮತ್ತು ಗೋಸ್ವಾಮಿ ಮಾಡಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ವಿರುದ್ಧ ಜನರಲ್ಲಿ ಈಗಾಗಲೇ ವ್ಯಾಪಕ ಆಕ್ರೋಶವಿದೆ.