ಬೆಂಗಳೂರಿನ ಸ್ಟಾರ್ ಹೋಟೆಲ್‌ ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ಆರೋಪ: ಆರೋಗ್ಯ ಇಲಾಖೆ ದಾಳಿ, ಕೊರಿಯಾ ಔಷಧ ವಶ

Spread the love

ಬೆಂಗಳೂರಿನ ಸ್ಟಾರ್ ಹೋಟೆಲ್‌ ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ಆರೋಪ: ಆರೋಗ್ಯ ಇಲಾಖೆ ದಾಳಿ, ಕೊರಿಯಾ ಔಷಧ ವಶ

ಬೆಂಗಳೂರು: ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ನೀಡಲು ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ಸಿದ್ಧತೆ ನಡೆದಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ನವೆಂಬರ್ 5 ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡಾ. ಎಂ. ಎನ್. ಹಾಗೂ ಮತ್ತೊಬ್ಬ ಮಹಿಳೆಯ ವಿರುದ್ಧ ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್ (ಐಎಡಿ) ಆರೋಗ್ಯ ಇಲಾಖೆಗೆ ತುರ್ತು ದೂರು ಸಲ್ಲಿಸಿತ್ತು. ಮಧ್ಯಾಹ್ನ 12 ಗಂಟೆಯಿಂದಲೇ ಚಿಕಿತ್ಸೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ, ಹೋಟೆಲ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಅನುಮತಿ ಇದೆಯೇ, ವೈದ್ಯರಿಗೆ ಅಗತ್ಯ ವೈದ್ಯಕೀಯ ಅರ್ಹತೆ ಇದೆಯೇ ಹಾಗೂ ಬಳಸಲಾಗುವ ಇಂಜೆಕ್ಷನ್‌ಗಳು ಕಾನೂನುಬದ್ಧವಾಗಿವೆಯೇ ಎಂಬುದನ್ನು ಪರಿಶೀಲಿಸಲು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮದನಿ ನೇತೃತ್ವದ ತಂಡ ಹೋಟೆಲ್‌ಗೆ ಭೇಟಿ ನೀಡಿತು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರ ಅಡಿ ನೋಂದಣಿ ಮಾಡಲಾಗಿದೆಯೇ, ವೈದ್ಯರ ವಿದ್ಯಾರ್ಹತೆ ಮತ್ತು ನೋಂದಣಿ ವಿವರಗಳೇನು, ಇಂಜೆಕ್ಷನ್ ಉತ್ಪನ್ನದ ತಯಾರಕರು ಯಾರು, ಅದರ ಬ್ಯಾಚ್ ನಂಬರ್, ಎಕ್ಸ್‌ಪೈರಿ ದಿನಾಂಕ ಹಾಗೂ ಗುಣಮಟ್ಟ ಏನು ಎಂಬ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ವಿದೇಶದಿಂದ ಆಮದು ಮಾಡಿಕೊಂಡ ಇಂಜೆಕ್ಷನ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪರಿಶೀಲನೆ ವೇಳೆ ಹಲವು ಔಷಧಗಳು, ತೂಕ ಇಳಿಸುವ ಪೌಡರ್ ಹಾಗೂ ವಿದೇಶದಲ್ಲಿ ತಯಾರಾದ ಇಂಜೆಕ್ಷನ್‌ಗಳು, ಕೊರಿಯಾ ದೇಶದ ಕೆಲವು ಇಂಜೆಕ್ಷನ್ ಬಾಕ್ಸ್ ಹಾಗೂ ಕವರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ, ಪತ್ತೆಯಾದ ಉತ್ಪನ್ನಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಡಾ. ಎಂ. ಎನ್. ಅವರು ದೆಹಲಿ ವಿಶ್ವವಿದ್ಯಾಲಯದ ಎಂಬಿಬಿಎಸ್ ಪ್ರಮಾಣಪತ್ರ ತೋರಿಸಿದ್ದಾರೆ. ಆದರೆ ಅವರ ವೈದ್ಯಕೀಯ ಅರ್ಹತೆಯ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ಪ್ರಮಾಣಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಗೆ ಪತ್ರ ಬರೆದು ಮಾಹಿತಿ ಕೇಳಲು ನಿರ್ಧರಿಸಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಕಲೆಹಾಕಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, “ಹೋಟೆಲ್‌ನಲ್ಲಿ ಇಂತಹ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರತಿಷ್ಠಿತ ಹೋಟೆಲ್‌ನಲ್ಲಿ ಕುಳಿತು ಹೇಗೆ ಇಂಜೆಕ್ಷನ್ ನೀಡುತ್ತಾರೆ, ಯಾವ ಔಷಧ ನೀಡುತ್ತಾರೆ, ಇದಕ್ಕೆ ಅರ್ಹತೆ ಅಥವಾ ಅವಕಾಶ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇವೆ. ಜಿಲ್ಲಾ ಆರೋಗ್ಯಾಧಿಕಾರಿಗೂ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.


Spread the love
Subscribe
Notify of

0 Comments