ನರೇಗಾ ಹೆಸರು ಬದಲಾವಣೆ ಮೂಲಕ ಮಹಾತ್ಮಾ ಗಾಂಧಿಜಿಯವರ ಹೆಸರನ್ನು ಅಳಿಸುವ ಹುನ್ನಾರ – ಜಯಪ್ರಕಾಶ್ ಹೆಗ್ಡೆ
ಬ್ರಹ್ಮಾವರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯ ಹೆಸರಿನಲ್ಲಿ ಬದಲಾವಣೆ ಮಾಡುವುದರ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನುನಿಧಾನವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.
ಅವರು ಶುಕ್ರವಾರ ಉಡುಪಿ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದು ಮನ್ ರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನರೇಗಾ ಯೋಜನೆಯನ್ನು ಅಂದು ಬಿಜೆಪಿಗರು ವಿರೋಧಿಸಿ ಈಗ ಅದನ್ನು ಒಪ್ಪಿ ಅದರ ಹೆಸರನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದಾರೆ. ಅಂದು ಪ್ರತಿಯೊಬ್ಬರಿಗೂ ಶಿಕ್ಷಣ ಹಕ್ಕನ್ನು ವಿರೋಧಿಸಿ ಬಿಜೆಪಿಗರು ಇಂದು ಯುಜಿಸಿ ವ್ಯವಸ್ಥೆಯನ್ನು ಅಳಿಸುವ ಪ್ರಯತ್ನಕ್ಕೆ ಹೊರಟಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿನಗಳ ಉದ್ಯೋಗ ಲಭಿಸಬೇಕು ಎನ್ನುವ ಉದ್ಧೇಶದಿಂದ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದನ್ನು ಹಂತಹಂತವಾಗಿ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರಕಾರ ಹೊಂದಿದೆ. ಇಷ್ಟೊಂದು ಒಳ್ಳೆಯ ಯೋಜನೆಯನ್ನು ಮಹಾತ್ಮಗಾಂಧಿ ಯೋಜನೆಗೆ ರಾಮ ಹೆಸರು ಇಡುವ ಬದಲು ರಾಮನ ಹೆಸರಿನಲ್ಲೆ ಹೊಸತಾದ ಯೋಜನೆಯನ್ನು ಪ್ರತಿಯೊಬ್ಬರೂ ಒಪ್ಪುತ್ತಿದ್ದೇವು ಎಂದರು.
ಕೇವಲ ಭಾಷಣಗಳನ್ನು ಮಾಡುವ ಬದಲು ಈ ಯೋಜನೆಯನ್ನು ಅಳಿಸಿ ಹಾಕುತ್ತಿರುವ ಕುರಿತು ಹಳ್ಳಿ ಹಳ್ಳಿಗಳಲ್ಲಿ ಚರ್ಚೆ ನಡೆಯಬೇಕು. ಬಿಜೆಪಿಗರು ಮಹಾತ್ಮಗಾಂಧಿಯವರ ಹೆಸರನ್ನಷ್ಟೇ ಬದಲಾಯಿಸಬಹುದು ಆದರೆ ಜನರ ಮನಸ್ಸಿನಿಂದ ಅವರನ್ನು ಅಳಿಸಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿಯವರ ಕೊಲೆಯಾದ ದಿನ ವಿಶ್ವಸಂಸ್ಥೆಯಲ್ಲಿ ಜಗತ್ತಿನ ಎಲ್ಲಾ ದೇಶಗಳ ಧ್ವಜಗಳನ್ನು ಕೆಳಗಿಳಿಲಾಯಿತು ಕಾರಣ ಅಂದು ಮಾನವೀಯತೆಯ ಕೊಲೆಯಾದ ದಿನ. ಅಂತಹ ವಿಶೇಷ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯ ಹೆಸರನ್ನು ಬದಲಿಸಲು ಹೊರಟಿರುವ ಬಿಜೆಪಿಗರ ನಿರ್ಧಾರ ಖಂಡನೀಯ ಎಂದರು.
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ದೇಶದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ಉತ್ತಮವಾಗಿ ಬದುಕಬೇಕು ಎನ್ನುವ ಉದ್ದೇಶದಿಂದ 2005 ರಲ್ಲಿ ಮನಮೋಹನ್ ಸಿಂಗ್ ಅವರು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು. ದೇಶದ ಬಡ ಜನರ ಹಸಿವು ನೀಗಿಸಲು ಈ ಯೋಜನೆ ಸಹಕಾರಿಯಾಗಿತ್ತು. ಮಹಾತ್ಮಗಾಂಧಿಯವರ ಕನಸಿನಂತೆ ಹಳ್ಳೀಗಳ ಉದ್ದಾರವಾಗಬೇಕು ಎನ್ನುವುದು ಕಾಂಗ್ರೆಸ್ ಸರಕಾರದ ಆಶಯವಾಗಿತ್ತು. ಆದರೆ ದೇಶದಲ್ಲಿ ಬಡಜನರು ಉದ್ದಾರವಾಗದೆ ಶ್ರೀಮಂತರೇ ಬೆಳೆಯಬೇಕು ಎನ್ನುವ ಆರ್ ಎಸ್ ಎಸ್ ತತ್ವವನ್ನು ಬಿಜೆಪಿ ಸರಕಾರ ಕಾರ್ಯರೂಪಕ್ಕೆ ತರಲು ಹೊರಟಿದೆ. ಮಹಾತ್ಮಾ ಗಾಂಧಿಯನ್ನು ಯುವಜನತೆ ಮರೆತು ಅವರನ್ನು ಕೊಂದ ನಾಥೂರಾಮ್ ಗೋಡ್ಸೆಗೆ ಬೆಂಬಲ ನೀಡಬೇಕು ಎನ್ನುವುದು ಕೇಂದ್ರದ ಬಿಜೆಪಿ ಸರಕಾರದ ಉದ್ದೇಶವಾಗಿದೆ. ಬಡವರನ್ನು ತುಳಿಯಲು ಪ್ರತಯ್ನಿಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂತು ನೋಡಲ್ಲ ಬದಲಾಗಿ ಉಗ್ರ ಪ್ರತಿಭಟನೆ ನಡಸಲಾಗುವುದು ಎಂದರು.
ಪ್ರತಿಭಟನೆಗೆ ಮುನ್ನ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆಕಾಶವಾಣಿ ಸರ್ಕಲ್ ಮಾರ್ಗವಾಗಿ ಹೊರಟು ರಥಬೀದಿ ರಸ್ತೆಯ ಮೂಲಕ ಬಸ್ ನಿಲ್ದಾಣದ ತನಕ ಪಾದಯಾತ್ರೆಯನ್ನು ನಡೆಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳಕೆಬೈಲ್, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರಾಘವೇಂದ್ರ ಶೆಟ್ಟಿ, ಭುಜಂಗ ಶೆಟ್ಟಿ, ರೋಶನ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ಪ್ರಶಾಂತ್ ಪೂಜಾರಿ, ಸಜ್ಜನ್ ಶೆಟ್ಟಿ, ಅಮೃತ್ ಶೆಣೈ, ದಿನಕರ ಹೇರೂರು, ಮುರಳಿ ಶೆಟ್ಟಿ, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.













