ನ. 29ರಂದು ಸೋದೆ ಮಠದ ಬಾಳೆ ಮುಹೂರ್ತ: ಪೂರ್ವಸಿದ್ಧತೆ ಕುರಿತು ಶಿಷ್ಯವರ್ಗದ ಸಭೆ
ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಮುಂಬರುವ ಪರ್ಯಾಯದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳಲ್ಲಿನ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತವು ನವೆಂಬರ್ 29ರಂದು ನೆರವೇರಲಿದ್ದು, ಇದರ ಪೂರ್ವಸಿದ್ಧತೆಗಳ ಕುರಿತು ಉಡುಪಿಯ ಸೋದೆ ಶ್ರೀ ವಾದಿರಾಜ ಮಠದಲ್ಲಿ ಶಿಷ್ಯವರ್ಗದ ಸಭೆ ನಡೆಯಿತು.
ಸಭೆಯಲ್ಲಿ ಕೋಟೇಶ್ವರ ಮಾಗಣೆ ಶಿಷ್ಯವೃಂದ, ಮಟ್ಟು ಗ್ರಾಮ ಶಿಷ್ಯವೃಂದ, ದೈವಜ್ಞ ಬ್ರಾಹ್ಮಣ ಶಿಷ್ಯವೃಂದದ ಪ್ರಮುಖರು ಹಾಗೂ ಶ್ರೀ ಮಠದ ಅನೇಕ ಭಕ್ತರು ಭಾಗವಹಿಸಿದ್ದರು.
ಬಾಳೆ ಮುಹೂರ್ತದ ಅಂಗವಾಗಿ ಕೈಗೊಳ್ಳಬೇಕಾದ ವಿವಿಧ ಪೂರ್ವಸಿದ್ಧತೆಗಳು, ಕಾರ್ಯಕ್ರಮಗಳ ವ್ಯವಸ್ಥೆ ಹಾಗೂ ಈ ಸಂದರ್ಭದಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು. ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗಾಗಿ ಅಗತ್ಯ ಸಿದ್ಧತೆಗಳು ಹಾಗೂ ವಿವಿಧ ಜವಾಬ್ದಾರಿಗಳ ಹಂಚಿಕೆ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸೋದೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು, ಸೋದೆ ಮಠ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್, ಯಕ್ಷಗಾನ ಕಲಾರಂಗದ ವತಿಯಿಂದ ಮುರಳಿ ಕಡೆಕಾರ್, ನಾರಾಯಣ ಹೆಗಡೆ, ಗಂಗಾಧರ್ ರಾವ್ ಹಾಗೂ ಶ್ರೀ ಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.













