ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

Spread the love

ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಜೂನ್ 29ರಂದು ನಡೆದಿದ್ದ ಬಹುಕೋಟಿ ಮೌಲ್ಯದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ಸಹಕರಿಸಿದ ಆರೋಪಿತರನ್ನು ಒಳಗೊಂಡಂತೆ ಒಟ್ಟು ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಜೂನ್ 29ರಂದು ನಸುಕಿನ ಸುಮಾರು 2.45 ಗಂಟೆಗೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಪತ್ನಿ ಹಾಗೂ ಮಗನೊಂದಿಗೆ KL-59-R-9450 ನೋಂದಣಿಯ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ (44) ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳು ಅಡ್ಡಗಟ್ಟಿದ್ದರು.

ಆರೋಪಿಗಳು ತಲವಾರು ತೋರಿಸಿ ಬೆದರಿಕೆ ಹಾಕಿ ದೂರುದಾರರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ದೂರುದಾರರ ಕಾರು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ (ಅಂದಾಜು ರೂ.20 ಲಕ್ಷ ಮೌಲ್ಯ), ಎರಡು ಮೊಬೈಲ್ ಫೋನ್ಗಳು ಹಾಗೂ ಕಾರು ಸೇರಿದಂತೆ ಒಟ್ಟು ರೂ.23.10 ಲಕ್ಷ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 84/2026ರಡಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು ಹಾಗೂ KPDLP ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಕರಣದ ತನಿಖೆ ವೇಳೆ ಜೂನ್ 30ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡ ಪ್ರದೇಶದಲ್ಲಿ ಆರೋಪಿಗಳು ನಂಬರ್ ಪ್ಲೇಟ್ ತೆಗೆದು ಬಿಟ್ಟು ಹೋಗಿದ್ದ ದೂರುದಾರರ ಮಾರುತಿ ಡಿಜೈರ್ ಕಾರನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಜುಲೈ 2ರಂದು ಪ್ರಕರಣದ ಆರೋಪಿ ನಿಮಿಲ್ ಆರ್.ಕೆ. (37) ಎಂಬಾತನನ್ನು ಕೇರಳದ ಕಣ್ಣೂರು ಜಿಲ್ಲೆಯ ಚಾಲದಲ್ಲಿರುವ ASTER MIMS ಆಸ್ಪತ್ರೆ ಸಮೀಪ ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಅದೇ ದಿನ ಕೃತ್ಯಕ್ಕೆ ಸಹಕರಿಸಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಇರ್ಷಾದ್ (40) ಎಂಬಾತನನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಕಾರು ಒದಗಿಸಿ ಆಶ್ರಯ ನೀಡಿದ್ದ ಮುಸ್ತಾಫ (49) ಎಂಬಾತನನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್ನ ಲಯನ್ಸ್ ಕ್ಲಬ್ ಬಳಿಯ ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿ ಒಟ್ಟು 16 ಮಂದಿ ಭಾಗಿಯಾಗಿದ್ದು, ಅವರಲ್ಲಿ 14 ಮಂದಿ ನೇರವಾಗಿ ದರೋಡೆಯಲ್ಲಿ ಭಾಗವಹಿಸಿದ್ದರೆ, ಇಬ್ಬರು ಆರೋಪಿಗಳಿಗೆ ಸಹಕಾರ ಹಾಗೂ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ.

ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳು ಸೇರಿದಂತೆ ಇನ್ನೂ 13 ಮಂದಿ ಆರೋಪಿಗಳ ಬಂಧನ ಬಾಕಿಯಿದೆ.

ದರೋಡೆಗೀಡಾದ ಮಾರುತಿ ಡಿಜೈರ್ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ನಾಲ್ಕು ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಮೂರು ಕಾರುಗಳು, ದರೋಡೆಗೀಡಾದ 180 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್ಗಳ ಪತ್ತೆ ಕಾರ್ಯ ಮುಂದುವರಿದಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಿವಾಸಿಗಳಾಗಿರುವುದು ತಿಳಿದುಬಂದಿದೆ.

ಉತ್ತರ ವಿಭಾಗದ ಎಸಿಪಿ ಶ್ರೀಕಾಂತ ಕೆ. ಹಾಗೂ ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್, ಪಿಎಸ್ಐಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ವಿವಿಧ ಪೊಲೀಸ್ ಠಾಣೆಗಳು ಮತ್ತು ಸಿಸಿಬಿ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments