ಪರ್ಯಾಯೋತ್ಸವದಲ್ಲಿ ಅಸಂವಿಧಾನಿಕ ಕೃತ್ಯ ಎಸಗಿದ ಡಿಸಿ ವಿರುದ್ದ ಕ್ರಮಕ್ಕೆ ಸಹಬಾಳ್ವೆ ಸಂಘಟನೆ ಆಗ್ರಹ

Spread the love

ಪರ್ಯಾಯೋತ್ಸವದಲ್ಲಿ ಅಸಂವಿಧಾನಿಕ ಕೃತ್ಯ ಎಸಗಿದ ಡಿಸಿ ವಿರುದ್ದ ಕ್ರಮಕ್ಕೆ ಸಹಬಾಳ್ವೆ ಸಂಘಟನೆ ಆಗ್ರಹ

ಉಡುಪಿ: ಪರ್ಯಾಯ ಕಾರ್ಯಕ್ರಮದಲ್ಲಿ ಅಸಂವಿಧಾನಿಕ ಕೃತ್ಯ ಎಸಗಿರುವ ಉಡುಪಿ ಜಿಲ್ಲಾಧಿಕಾರಿ ಅವರ ಮೇಲೆ ಕ್ರಮಕ್ಕೆ ಸಹಬಾಳ್ವೆ ಉಡುಪಿ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಆಗ್ರಹಿಸಿದ್ದಾರೆ.

ಜನವರಿ 18ರಂದು ನಡೆದ ಉಡುಪಿಯ ಪರ್ಯಾಯ ಉತ್ಸವದಲ್ಲಿ ಭಾಗವಹಿಸಿದ ಉಡುಪಿಯ ಜಿಲ್ಲಾಧಿಕಾರಿಯವರಾದ ಟಿ.ಕೆ.ಸ್ವರೂಪ ಅವರು, ಆರ್.ಎಸ್.ಎಸ್. ಸಂಘಟನೆಯ ಧ್ವಜವನ್ನು ಹಿಡಿದು, ಬೀಸುತ್ತಾ ಪುರ ಪ್ರವೇಶಕ್ಕೆ ಸ್ವಾಗತ ನೀಡಿರುವುದು ಸಚಿತ್ರವಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಜಿಲ್ಲಾಧಿಕಾರಿಯವರಾಗಲೀ ಜಿಲ್ಲಾಡಳಿತದ ಭಾಗವಾಗಿರುವ ಯಾವುದೇ ನೌಕರರು ಇರಲೀ, ಸಾರ್ವಜನಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಸಂವಿಧಾನದ ನಿಯಮಗಳ ಒಳಗೆ ನಡೆದುಕೊಳ್ಳಬೇಕು. ಅದನ್ನು ಉಲ್ಲಂಘಿಸಿದರೆ ಅಂತಹವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಲೇ ಬೇಕು. ತಮ್ಮ ಸಂವಿಧಾನ ವಿರೋಧಿ ನಡೆಗೆ ಸಮರ್ಥನೆಯಾಗಿ ಸ್ವರೂಪ ಅವರು, ತಾವು ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ, ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನೆ ಹೊರತು, ಅದರಲ್ಲಿ ಬೇರೆ ರಾಜಕೀಯ ಹಿತಾಸಕ್ತಿ ಇರಲಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿಯವರು ಜಿಲ್ಲಾಡಳಿತದ ಪರವಾಗಿ ಭಾಗವಹಿಸಿದಾಗ, ಸಂವಿಧಾನಿಕ ನಿಯಮಗಳನ್ನು ಪಾಲಿಸಬೇಕು ಎಂಬ ಜಾಗ್ರತಿ ಇಟ್ಟುಕೊಳ್ಳಬೇಕಿತ್ತು.

ಯಾರೋ ದೊಣ್ಣೆ ನಾಯಕರು, ಸಂವಿಧಾನ ವಿರೋಧಿ, ಮತವಿಭಜಕ ಸಂಘಟನೆಯ ಧ್ವಜವನ್ನು ಮೆರೆಸಲು ಕುಮ್ಮಕ್ಕು ಕೊಟ್ಟರೆ, ತಮ್ಮ ಸ್ಥಾನಮಾನದ ಘನತೆ ತೋರಿ ನಿರಾಕರಿಸಬೇಕಿತ್ತು. ಅದನ್ನು ಬಿಟ್ಟು, ಈ ಬಗೆಯಲ್ಲಿ ವರ್ತಿಸಿದ್ದೇ ಅಲ್ಲದೇ, ತಮ್ಮ ನಡೆಯನ್ನು ತಮ್ಮ ಸ್ಥಾನವನ್ನು ಮುಂದು ಮಾಡಿ ಸಮರ್ಥಿಸಿಕೊಳ್ಳುವುದು ಜಿಲ್ಲೆಯ ಶಾಂತಿ ಭಂಜಕ ಶಕ್ತಿಗಳಿಗೆ ಏನು ಸಂದೇಶ ಕೊಡುತ್ತದೆ, ನಿರಂತರ ಹಲ್ಲೆಗೆ ತುತ್ತಾಗುತ್ತಿರುವ ಜನ ಸಮುದಾಯಗಳಿಗೆ ಯಾವ ರೀತಿಯ ಆತಂಕ ಹುಟ್ಟಿಸುತ್ತದೆ ಎಂಬ ಅರಿವು ಜಿಲ್ಲಾಧಿಕಾರಿಯವರಿಗೆ ಇದ್ದಂತಿಲ್ಲ.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಇಂತಹ ವರ್ತನೆಯನ್ನು ವೇದಿಕೆಯು ಖಂಡಿಸುತ್ತದೆ. ಜಿಲ್ಲಾಧಿಕಾರಿಯವರ ಸಂವಿಧಾನ ನಿಯಮಬಾಹಿರ ವರ್ತನೆಯನ್ನು ಕರ್ನಾಟಕ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ವೇದಿಕೆಯು ಪ್ರತಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments