ದ.ಕ.: ಆಟೊ ರಿಕ್ಷಾ ಪ್ರಯಾಣ ದರ ಮರು ಪರಿಷ್ಕರಣೆ
ಮಂಗಳೂರು: ಆಟೊ ರಿಕ್ಷಾ ಪ್ರಯಾಣ ದರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆ.28ರಂದು ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಹಿಂದೆ ಅಂದರೆ 2022ರ ನವೆಂಬರ್ 23ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ನಂತರದ ಪ್ರತಿ ಕಿ.ಮೀ. ನಿಗದಿಪಡಿಸಿದ 20 ರೂ.ವನ್ನು ಪರಿಗಣಿಸದ ಕಾರಣ ಆ.28ರ ಆದೇಶವನ್ನು ಹಿಂಪಡೆದು ಆಟೊ ರಿಕ್ಷಾ ಪ್ರಯಾಣ ದರವವನ್ನು ಪರಿಷ್ಕೃರಿಸಲಾಗಿದೆ. ನ.1ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ, ಎಲ್‌ಪಿಜಿ ಮತ್ತು ಡೀಸೆಲ್ ಬೆಲೆಗಳು ಹಾಗೂ ವಾಹನದ ಬಿಡಿಭಾಗಗಳ ಬೆಲೆ ಏರಿಕೆಯಾಗಿರುತ್ತದೆ. ಇದರಿಂದ ಆಟೋ ಚಾಲಕರ ಖರ್ಚು ವೆಚ್ಚಗಳು ಕೂಡಾ ಹೆಚ್ಚಾಗಿರುತ್ತದೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನು ಪರಿಷ್ಕರಿಸಲಾಗಿದೆ.
ಕನಿಷ್ಟ ದರ ಮೊದಲ 1.5 ಕಿ.ಮೀ.-40 ರೂ.(ಗರಿಷ್ಟ 3 ಮಂದಿ ಪ್ರಯಾಣಿಕರು), ನಂತರದ ಪ್ರತಿ ಕಿ.ಮೀ. ದರ- 23 ರೂ.(ಗರಿಷ್ಟ 3 ಜನ ಪ್ರಯಾಣಿಕರು),ಕಾಯುವ ದರ -ಮೊದಲ 10 ನಿಮಿಷ ಉಚಿತ ಮತ್ತು ನಂತರದ 15 ನಿಮಿಷದವರಗೆ ಅಥವಾ ಅದರ ಭಾಗಕ್ಕೆ 5ರೂ.
ಪ್ರಯಾಣಿಕರ ಸರಕಿಗೆ (ಲಗೇಜ್)-ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು, ಮೊದಲ 20 ಕಿ.ಗ್ರಾಂ.ಗಳಿಗೆ ಉಚಿತ ಮತ್ತು ನಂತರದ 20 ಕೆ.ಜಿ.ಗಳಿಗೆ ಅಥವಾ ಅದರ ಭಾಗಕ್ಕೆ 5 ರೂ. ರಾತ್ರಿ ವೇಳೆ ದರ-ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೊ ರಿಕ್ಷಾ ಗಳಲ್ಲಿಯೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
ಆಟೊ ರಿಕ್ಷಾ ಚಾಲಕ/ಮಾಲಕರು ತಮ್ಮ ಆಟೊ ರಿಕ್ಷಾಗಳ ಪ್ಲಾಗ್ ಮೀಟರ್‌ನಲ್ಲಿ ಪರಿಷ್ಕ್ಕರಿಸಿ ನಿಗದಿ ಪಡಿಸಿದ ದರವನ್ನು ರಿಕ್ಯಾಲೀಬರೇಶನ್ ಹಾಗೂ ಸೀಲ್ ಮಾಡಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
ಇದಕ್ಕೆ ತಪ್ಪಿದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು/ಪರವಾನಿಗೆ ಅಮಾನತ್ತು/ರದ್ದತಿ ಕುರಿತು ಕ್ರಮ ಕೈಗೊಳ್ಳಲಾಗುವುದು ಮತ್ತು ಇತರ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿದೆ.













