ಪಣಂಬೂರು: ಸಮುದ್ರದಲ್ಲಿ ಮುಳುಗಿ ಬಾಲಕ ನಾಪತ್ತೆ
ಮಂಗಳೂರು : ಸ್ನೇಹಿತರೊಂದಿಗೆ ಪಣಂಬೂರು ಬೀಚ್ನಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕನೋರ್ವ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಎಂಬವರ ಮಗ ಶ್ರೇಯಸ್ (14) ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಬಾಲಕ ಎಂದು ತಿಳಿದು ಬಂದಿದೆ.
ಶ್ರೇಯಸ್ ತನ್ನ ಐದು ಮಂದಿ ಸ್ನೇಹಿತರೊಂದಿಗೆ ಪಣಂಬೂರು ಕಡಲ ಕಿನಾರೆಗೆ ಬಂದಿದ್ದು, ಬಳಿಕ ಸಮುದ್ರದಲ್ಲಿ ಸ್ನೇಹಿತರೆಲ್ಲರೂ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸಮುದ್ರದ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿ ಆತ ಸಮುದ್ರ ಪಾಲಾಗಿದ್ದಾನೆ ಎಂದು ಹೇಳಲಾಗಿದೆ.
ಈ ಸಂಬಂಧ ಶ್ರೇಯಸ್ ನ ತಂದೆ ಆತನ ಸ್ನೇಹಿತರೊಂದಿಗೆ ಮಾಹಿತಿ ತಿಳಿದು ಬಂದ ಬಳಿಕ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶ್ರೇಯಸ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.













