ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಪೂಜಾರಿ ಬೀಜಾಡಿ ಅವರನ್ನು ಪರಿಗಣಿಸಲು ಆಗ್ರಹ
ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಿಲ್ಲವ ಸಮುದಾಯದ ಹಿರಿಯ ನಾಯಕ ಅಶೋಕ್ ಪೂಜಾರಿ ಬೀಜಾಡಿ ಅವರನ್ನು ಪರಿಗಣಿಸುವಂತೆ ಯೋಗಿಶ್ ಪೂಜಾರಿ ಕೋಡಿ, ಚಂದ್ರ ಅಮೀನ್ ಕುಂದಾಪುರ ಹಾಗೂ ಕೇಶವ ಭಟ್ ಆಗ್ರಹಿಸಿದ್ದಾರೆ.
ಅಶೋಕ್ ಪೂಜಾರಿ ಬೀಜಾಡಿ ಅವರು ಸಂಘಟನಾ ಚತುರರಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅಲ್ಲದೆ, ಕುಂದಾಪುರ ತಾಲೂಕು ಬಿಲ್ಲವ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುತ್ತಾ ಸತತ ಮೂರು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ.
ಬಿಲ್ಲವ ಸಮುದಾಯ ಮಾತ್ರವಲ್ಲದೆ ಇತರ ಧರ್ಮ ಹಾಗೂ ಸಮುದಾಯಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಅಶೋಕ್ ಪೂಜಾರಿ ಅವರು ಜಿಲ್ಲೆಯಾದ್ಯಂತ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯವು ಪ್ರಭಾವಿ ಮತದಾರ ಸಮುದಾಯವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದರೆ ಪಕ್ಷದ ಸಂಘಟನೆಗೆ ಹೆಚ್ಚಿನ ಬಲ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಅಶೋಕ್ ಪೂಜಾರಿ ಬೀಜಾಡಿ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನೇಮಕಗೊಳಿಸಬೇಕು. ಇದರಿಂದ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಮುಂದಿನ ಚುನಾವಣಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.













