‘ಸ್ಪೇಟ್‌ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ ಡಾ. ನಾಗಲಕ್ಷ್ಮಿ ಚೌಧರಿ
ಮಂಗಳೂರು: ಮಂಗಳೂರಿನ ಹೃದಯಭಾಗವಾದ ಸ್ಟೇಟ್ ಬ್ಯಾಂಕ್ ಪರಿಸರದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಮಹಿಳೆಯರ ಬದುಕು ದುಸ್ತರವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಸಿ ಮತ್ತು ಒಣ ಮೀನು ಮಾರುಕಟ್ಟೆಯ ಪ್ರತಿ ಮೂಲೆಗೂ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ದಶಕಗಳಿಂದ ಮೀನು ಮಾರಿ ಜೀವನ ಸಾಗಿಸುತ್ತಿರುವ ನೂರಾರು ತಾಯಂದಿರು ತಮ್ಮ ನೋವನ್ನು ಅಧ್ಯಕ್ಷರ ಮುಂದೆ ತೋಡಿಕೊಂಡರು.
ಮಾರುಕಟ್ಟೆಯಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿದ ನಂತರ ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, ಮಹಿಳೆಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ ವಿವರಿಸಿದರು.
ಮಾರುಕಟ್ಟೆಯಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ತೀವ್ರವಾದ ವಾಸನೆ ಬರುತ್ತಿದೆ. ಇದು ಇಲ್ಲಿ ದಿನವಿಡೀ ಕೆಲಸ ಮಾಡುವ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಾಯಂದಿರು ತನ್ನ ಮುಂದೆ ತನ್ನ ಕಷ್ಟವನ್ನು ತೋಡಿಕೊಂಡಿದ್ದಾರೆ. ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಜೊತೆಗೆ ವ್ಯಾಪಾರ ಮಾಡಲು ಸ್ಥಳಾವಕಾಶವೂ ತೀರಾ ಕಡಿಮೆಯಿದೆ. ಇಲ್ಲಿ ಭದ್ರತಾ ವ್ಯವಸ್ಥೆಯ ಕೊರತೆ ಇರುವುದರಿಂದ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ತಾಯಂದಿರು ತನ್ನ ಮುಂದೆ ಸಮಸ್ಯೆಗಳನ್ನು ತೋಡಿಕೊಂಡಿದ್ದಾಗಿನ ವಿವರಿಸಿದರು.
“ಈ ಎಲ್ಲ ಸಮಸ್ಯೆಗಳನ್ನು ನಾನು ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತರುತ್ತೇನೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನೂತನ ಮಾರುಕಟ್ಟೆಯಲ್ಲಿ ಅಗತ್ಯವಿರುವ ವೈಜ್ಞಾನಿಕ ಬದಲಾವಣೆಗಳನ್ನು ಮಾಡಿಕೊಡಲು ಒತ್ತಾಯಿಸುತ್ತೇನೆ. ಮೀನು ಮಾರುವ ತಾಯಂದಿರ ಹಿತ ಕಾಯುವುದು ನಮ್ಮ ಆದ್ಯತೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದರು.
ಸರ್ಕಾರ ನಿರ್ಮಿಸಿರುವ ನೂತನ ಮಾರುಕಟ್ಟೆಗೆ ಸ್ಥಳಾಂತರವಾಗುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನೂತನ ಮಾರುಕಟ್ಟೆಗೆ ಹೋಗಲು ಮೀನು ಮಾರುವ ತಾಯಂದಿರಿಗೆ ಇಷ್ಟವಿದೆ. ಆದರೆ ಆ ಕಟ್ಟಡವನ್ನು ವೈಜ್ಞಾನಿಕವಾಗಿ ಕಟ್ಟಲಾಗಿಲ್ಲ ಎನ್ನುವುದು ಅವರ ಬಲವಾದ ಆರೋಪವಾಗಿದೆ. ಯಾವುದೇ ಸೌಲಭ್ಯ ಕೇಳಿದರೂ ‘ಹೊಸ ಮಾರುಕಟ್ಟೆ ಮಾಡಿಕೊಟ್ಟಿದ್ದೇವೆ’ ಎಂಬ ಸಿದ್ಧ ಉತ್ತರ ಅಧಿಕಾರಿಗಳಿಂದ ಬರುತ್ತದೆ. ಆದರೆ ವ್ಯಾಪಾರಕ್ಕೆ ಪೂರಕವಾದ ಬದಲಾವಣೆಗಳನ್ನು ಮಾಡಿಕೊಟ್ಟರೆ ಮಾತ್ರ ಅಲ್ಲಿಗೆ ಶಿಫ್ಟ್ ಆಗುವುದಾಗಿ ಮಹಿಳೆಯರು ಪಟ್ಟು ಹಿಡಿದಿದ್ದಾರೆ,” ಎಂದು ತಿಳಿಸಿದರು.
ಬಸ್ ನಿಲ್ದಾಣದ ಸಮೀಪವಿರುವುದರಿಂದ ಈ ಹಳೆಯ ಮಾರುಕಟ್ಟೆಯಲ್ಲೇ ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂಬುದು ಮಹಿಳೆಯರ ಅಭಿಪ್ರಾಯ. ಆದರೆ ಇಲ್ಲಿ ಬಸ್ ನಿಲ್ದಾಣ ವಿಸ್ತರಣೆಯ ಪ್ರಸ್ತಾವನೆಯೂ ಇರುವುದರಿಂದ, ಎರಡೂ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ ಎಂದರು.













