ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಉಪಾಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ
ಉಡುಪಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆ.ಎಸ್.ಹೆಚ್.ಎ.) ದ ಉಪಾಧ್ಯಕ್ಷರಾಗಿ ಉಡುಪಿಯ ಖ್ಯಾತ ಹೋಟೆಲು ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಸ್ತುತ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 1954ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘವು (ಕೆ.ಎಸ್.ಹೆಚ್.ಎ.) ಕರ್ನಾಟಕದ 30 ಜಿಲ್ಲೆಗಳ ಹೋಟೆಲ್ ಸಂಘಗಳ ಸಹಯೋಗದೊಂದಿಗೆ ಅತ್ಯುನ್ನತ ಸಂಸ್ಥೆಯಾಗಿದೆ. ಕೆ.ಎಸ್.ಹೆಚ್.ಎ. ಸಂಸ್ಥೆಯು ರಾಜ್ಯದಲ್ಲಿರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ದರ್ಶಿನಿ, ಮಧ್ಯಮ, ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋಟೆಲ್ ಉದ್ಯಮವನ್ನು ಬೆಂಬಲಿಸುವಲ್ಲಿ ಕೆ.ಎಸ್.ಹೆಚ್.ಎ. ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ.
ಹೋಟೆಲ್ ಉದ್ಯಮ ವಲಯದಲ್ಲಿರುವ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರನ್ನು ನಂಬಿರುವ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸುವತ್ತ ಈ ಸಂಸ್ಥೆಯು ನಿರಂತರ ಪ್ರಯತ್ನದಲ್ಲಿರುತ್ತದೆ. ಕೆ.ಎಸ್.ಹೆಚ್.ಎ. ಸದಸ್ಯರು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಮುಖ ಪಾಲುದಾರರಾಗಿದ್ದಾರೆ.
ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ರಾಜ್ಯ ಹೋಟೆಲುಗಳ ಹಿತಾಸಕ್ತಿಯನ್ನು ಕಾಯಲು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಪ್ರಸಕ್ತ ಸಾಲಿನ ಅವಧಿಗೆ ಕಾರ್ಯಕಾರಿ ಸಭೆಯಲ್ಲಿ ಒಕ್ಕೊರಲಿನ ಆಯ್ಕೆ ಮಾಡಲಾಯಿತು.
ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಆಯ್ಕೆ ಕರಾವಳಿ ವಿಭಾಗದಲ್ಲಿ ಗಣನೀಯ ಅಭಿವೃದ್ಧಿಯನ್ನು ಕೈಗೊಳ್ಳಲು ಹಾಗೂ ಕುಂದು-ಕೊರತೆಗಳ ನಿವಾರಣೆಗೆ ಸಹಕಾರಿಯಾಗಲಿದೆ. ಹಾಗೆಯೇ ಹೋಟೆಲ್ ಉದ್ಯಮದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ನಮ್ಮ ಸಂಘವು ಮತ್ತಷ್ಟು ಉನ್ನತ ಸ್ಥಾನಕ್ಕೆ ತಲುಪಲೂ ಸಹಕಾರಿಯಾಗಲಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಡಾ. ತಲ್ಲೂರು ಅವರಿಗೆ ಶುಭ ಹಾರೈಸಿದೆ.
ಡಾ. ತಲ್ಲೂರು ಅವರು ಪ್ರಸ್ತುತ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ರಂಗಭೂಮಿ ಉಡುಪಿ ಅಧ್ಯಕ್ಷರು ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ತಲ್ಲೂರು ಅವರ ಸಮಾಜ ಸೇವೆ, ಕಲಾರಾಧನೆಗೆ ಸಂದ ಪ್ರಶಸ್ತಿಗಳೂ ಸಾವಿರಾರು. ಕರ್ನಾಟನ ಜಾನಪದ ವಿಶ್ವವಿದ್ಯಾಲಯ ಅವರಿಗೆ ೨೦೨೨ನೇ ಸಾಲಿನ ‘ಗೌರವ ಡಾಕ್ಟರೇಟ್ ‘ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಸಾವಿರಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.













