ಮಾದಕ ವಸ್ತು ಮಾರಾಟ ಜಾಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳ ಬಂಧನ
ಮಂಗಳೂರು: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಉಡುಪಿ ಜಿಲ್ಲೆ ಕೋಟೇಶ್ವರ ನಿವಾಸಿ ಪ್ರಸ್ತುತ ಮಂಗಳೂರು ಪಾಂಡೇಶ್ವರದಲ್ಲಿ ವಾಸ ವಾಗಿರುವ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಮಂಗಳೂರು ಬಲ್ಮಠ ನಿವಾಸಿ ಮಕ್ಸೂದ್ ಸಾಗ್ (23) ಮತ್ತು ಕೇರಳದ ಕೊಟ್ಟಾಯಂ ನಿವಾಸಿ ಫೆಲಿಕ್ಸ್ ಪಿ. ಜೋಸೆಫ್ (20) ಎಂಬವರನ್ನು ಬಂಧಿಸಿ 53.87 ಗ್ರಾಂ ಎಂ.ಡಿ.ಎಂ.ಎ, 103.20 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ ಎಂ.ಜಿ. ಹೆಕ್ಟರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 4ರಂದು ಬದ್ರಿಯಾ ರಸ್ತೆಯ ಕ್ಲಾಸಿಕ್ ಕಂಫರ್ಟ್ ಲಾಡ್ಜ್ನಲ್ಲಿ ರೂಮ್ ಪಡೆದು ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ.
ಉತ್ತರ ಠಾಣೆ ವ್ಯಾಪ್ತಿಯಲ್ಲಿ ಕಂಕನಾಡಿ ನಿವಾಸಿ ಎಡಲ್ ರೋಚ್ (33) ಮತ್ತು ಕದ್ರಿ ಮಲ್ಲಿಕಟ್ಟೆ ನಿವಾಸಿ ಆರೋನ್ ವಿಶಾಲ್ ಲಸ್ರಾದೋ (18) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 60 ಗ್ರಾಂ ಹೈಡ್ರೋ ವೀಡ್ ಗಾಂಜಾ, 1 ಕೆಜಿ 155 ಗ್ರಾಂ ಗಾಂಜಾ ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗ್ರೀನ್ ಪಾರ್ಕ್ ಮೈದಾನ, ಬಂದರ್ ಸಮೀಪ ಕಾರಿನಲ್ಲಿ ಕುಳಿತು ಯುವಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವಾಗ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಮುಂಬೈ ನಿವಾಸಿ ಸಂದೀಪ್ ಶೆಟ್ಟಿ ಎಂಬಾತ ದುಬೈನಲ್ಲಿ ಹೋಟೆಲ್ ಮ್ಯಾನೇಜರ್ ಆಗಿದ್ದು, ಹೈಡ್ರೋ ವೀಡ್ ಗಾಂಜಾವನ್ನು ವಿಮಾನದ ಮೂಲಕ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸಾಗಾಟ ಮಾಡಲು ಎಡಲ್ ರೋಚ್ ಅನ್ನು ನೇಮಕ ಮಾಡಿದ್ದನು.
ಎಡಲ್ ರೋಚ್ ಹಾಗೂ ಆರೋನ್ ಲಾಸ್ರಾದೋ ಅವರು ಮಕ್ಸೂದ್ ಸಾಗ್ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಹಾಗೂ ಅಹಮ್ಮದ್ ಅಲಿ ಅರ್ಷಾನ್ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳು ಬೆಂಗಳೂರಿನಿಂದ ಎಂ.ಜಿ. ಹೆಕ್ಟರ್ ವಾಹನದಲ್ಲಿ ಮಾದಕ ವಸ್ತುಗಳನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.













