ಕುಂಪಲದ ಅನಧಿಕೃತ ಗುಜರಿ ಅಂಗಡಿಯಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಗುಜರಿ ಸಾಮಾಗ್ರಿಗಳು

Spread the love

ಕುಂಪಲದ ಅನಧಿಕೃತ ಗುಜರಿ ಅಂಗಡಿಯಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಗುಜರಿ ಸಾಮಾಗ್ರಿಗಳು

ಮಂಗಳೂರು: ಬಾಡಿಗೆ ಕೋಣೆಯಲ್ಲಿ ಅನಧಿಕೃತವಾಗಿ‌ ಕಾರ್ಯಾಚರಿಸುತ್ತಿದ್ದ ಗುಜರಿ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ಗುಜರಿ ಸಾಮಾಗ್ರಿಗಳು ಸುಟ್ಟು ಕರಕಲಾದ ಘಟನೆ ಗುರುವಾರ ಸಂಜೆ ಕುಂಪಲ,ಚೇತನ ನಗರ ಎಂಬಲ್ಲಿ ನಡೆದಿದೆ.

ಚೇತನ ನಗರದ ಸಣ್ಣ ಬಾಡಿಗೆ ಕೋಣೆಯೊಂದರಲ್ಲಿ ಅಬ್ದುಲ್ ತುಫೇಲ್ ಎಂಬವರು ಸ್ಥಳೀಯ ಸೋಮೇಶ್ವರ ಪುರಸಭೆ ಆಡಳಿತದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಗುಜರಿ ಅಂಗಡಿಯನ್ನ ನಡೆಸುತ್ತಿದ್ದರೆನ್ನಲಾಗಿದೆ.ಈ ಬಗ್ಗೆ ಪುರಸಭೆಯಿಂದ ಗುಜರಿ ಅಂಗಡಿ ಮಾಲೀಕನಿಗೆ ಮೂರು ಬಾರಿ ನೋಟೀಸು ಮಾಡಿದ್ದರೂ ಕ್ಯಾರೇ ಮಾಡದೆ ಗುಜರಿ ವಹಿವಾಟು ನಡೆಸುತ್ತಿದ್ದೆನೆನ್ನಲಾಗಿದೆ.

ಗುರುವಾರ ಸಂಜೆ ಗುಜರಿ ಅಂಗಡಿ ಮುಚ್ಚಲ್ಪಟ್ಟ ಬಳಿಕ ಒಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಯು ಅಕ್ಕ ಪಕ್ಕದ ಮನೆಗಳಿಗೆ ವ್ಯಾಪಿಸದಂತೆ ಎಚ್ಚೆತ್ತ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ.

ಚೇತನ ನಗರ ಜನನಿಬೀಡ ಪ್ರದೇಶವಾಗಿದ್ದು ,ರಾತ್ರಿ ವೇಳೆ ಘಟನೆ ನಡೆದಿದ್ದರೆ ಸುತ್ತ ಮುತ್ತಲ ಮನೆಗಳಿಗೂ ಬೆಂಕಿ ವ್ಯಾಪಿಸಿ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಇಕ್ಕಟ್ಟಾದ ಕುಂಪಲ ಮುಖ್ಯ ರಸ್ತೆಯಲ್ಲಿ ತಾಸುಗಟ್ಟಲೆ ಸಂಚಾರ ವ್ಯತ್ಯಯವಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ ಹಾಗೂ ಸದಸ್ಯರಾದ ಹರೀಶ್ ಕುಂಪಲ,ಮನೋಜ್ ಕಟ್ಟೆಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿರುವ ಗುಜರಿ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರು ಅಧಿಕಾರಿಗಳನ್ನ ಒತ್ತಾಯಿಸುತ್ತಲೆ ಬಂದಿದ್ದರು.


Spread the love
Subscribe
Notify of

0 Comments