ಉಡುಪಿ ಜಿಲ್ಲೆಯಲ್ಲಿ ಪ್ರಾರ್ಥನೆ, ಧ್ಯಾನದೊಂದಿಗೆ ಗುಡ್‌ ಫ್ರೈಡೆ ಆಚರಣೆ

Spread the love

ಉಡುಪಿ ಜಿಲ್ಲೆಯಲ್ಲಿ ಪ್ರಾರ್ಥನೆ, ಧ್ಯಾನದೊಂದಿಗೆ ಗುಡ್‌ ಫ್ರೈಡೆ ಆಚರಣೆ

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು.

ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ. ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಈ ವೇಳೆ ಸಂದೇಶ ನೀಡಿದ ಬಿಷಪ್ ಜೆರಾಲ್ಡ್ ಲೋಬೊ ಅವರು ಈ ಲೋಕವನ್ನು ಉಳಿಸಲು ಶತ್ರುಗಳ ವಶವಾದ ಯೇಸುಕ್ರಿಸ್ತರು ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದರು. ಈ ಲೋಕದಲ್ಲಿ ಪಾಪಮಾಡಿದ ಪ್ರತಿ ಮನುಷ್ಯನಿಗಾಗಿ ಅವರು ಶಿಲುಬೆಯನ್ನು ಹೊತ್ತು ಲೋಕವನ್ನು ಕಾಪಾಡಲು ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಯೇಸುಕ್ರಿಸ್ತರು ತನ್ನ ಗೆಳೆಯನಿಗಾಗಿ ಪ್ರಾಣಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ ಎನ್ನುವುದನ್ನು ತನ್ನ ಕೃತಿಯ ಮೂಲಕ ತೋರಿಸಿದರು. ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದ ಯೇಸು ಕ್ರಿಸ್ತರು ಪ್ರೀತಿ, ಕ್ಷಮೆ ಮತ್ತು ತ್ಯಾಗದ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದರು.

ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜಾ, ಸಂಪದ ಸಂಸ್ಥೆಯ ನಿರ್ದೇಶಕ ವಂ|ರೆಜಿನಾಲ್ಡ್ ಪಿಂಟೊ, ಪಿಲಾರ್ ಸಭೆಯ ವಂ|ವಿನ್ಸೆಂಟ್ ಮಚಾದೊ ಉಪಸ್ಥಿತರಿದ್ದರು.

ಜಿಲ್ಲೆಯ ಕೆಲವು ಚರ್ಚುಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆ ಗಳನ್ನು ಪ್ರಸ್ತುತಪಡಿಸಲಾಯಿತು.

ಚರ್ಚಿನಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸುಕ್ರಿಸ್ತನ ಕೊನೆಯ ಗಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ಮುತ್ತಿಟ್ಟು ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡಬಗ್ಗರಿಗಾಗಿ ನೀಡಿದರು.


Spread the love
Subscribe
Notify of

0 Comments
Inline Feedbacks
View all comments