ಕರಾವಳಿ, ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದ ಉತ್ತೇಜನ: ಸಚಿವ ಕೆ.ಜೆ. ಜಾರ್ಜ್

Spread the love

ಕರಾವಳಿ, ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದ ಉತ್ತೇಜನ: ಸಚಿವ ಕೆ.ಜೆ. ಜಾರ್ಜ್

ಮಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ವಿಶೇಷ ಒತ್ತು ನೀಡಿದ್ದು, ನದಿ ಪ್ರವಾಸೋದ್ಯಮ, ಕ್ರೂಸ್, ಹೌಸ್‌ಬೋಟ್, ಬೀಚ್ ಪ್ರವಾಸೋದ್ಯಮ, ವಾಟರ್ ಸ್ಪೋರ್ಟ್ಸ್ ಹಾಗೂ ಸ್ಥಳೀಯ ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾ ಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ತಣ್ಣೀರುಬಾವಿ ‘ಬ್ಲೂ ಫ್ಲ್ಯಾಗ್’ ಕಡಲತೀರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನೇತ್ರಾವತಿ ನದಿ, ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್, ಕರಾವಳಿ ಪ್ರದೇಶಗಳು ಹಾಗೂ ನ್ಯೂ ಮಂಗಳೂರು ಬಂದರಿನ ಪ್ರವಾಸೋದ್ಯಮ ಸಾಮರ್ಥ್ಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಜಾರ್ಜ್ ಅವರು ನೇತ್ರಾವತಿಯಲ್ಲಿ ರಿವರ್ ಕ್ರೂಸ್, ಹೌಸ್‌ಬೋಟ್ ನೇತ್ರಾವತಿ ನದಿಯಲ್ಲಿ ರಿವರ್ ಕ್ರೂಸ್ ಹಾಗೂ ಹೌಸ್‌ಬೋಟ್ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಸ್ಥಳೀಯ ಮೀನುಗಾ ರರು ಮತ್ತು ಕರಾವಳಿ ಸಮುದಾಯದ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಅವರಿಗೆ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ ಎಂದರು.

*ಮಂಗಳೂರು-ಗೋವಾ ಕ್ರೂಸ್ ಪ್ರವಾಸೋದ್ಯಮ: ಕ್ರೂಸ್ ಹಡಗುಗಳಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಕರಾವಳಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕ್ರೂಸ್ ಸಂಪರ್ಕಿತ ಪ್ರವಾಸಿ ವಲಯಗಳು ಮತ್ತು ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ನ್ಯೂ ಮಂಗಳೂರು ಬಂದರಿನ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಕ್ರೂಸ್ ಹಡಗುಗಳನ್ನು ಆಕರ್ಷಿಸುವ ಕುರಿತು ಚರ್ಚಿಸಲಾಗಿದೆ.

ಮಂಗಳೂರು-ಕಾರವಾರ- ಗೋವಾ ವಲಯದಲ್ಲಿ ದೇಶೀಯ ಕ್ರೂಸ್ ಸೇವೆಗಳನ್ನು ಉತ್ತೇಜಿಸಲು ಖಾಸಗಿ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರಾವಳಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಜೆಟ್ಟಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಅಗತ್ಯ ಅನುಮತಿಗಳಿಗಾಗಿ ಕೇಂದ್ರ ಸರಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಹೇಳಿದರು.

ಬ್ಲೂ ಫ್ಲ್ಯಾಗ್ ಬೀಚ್‌ಗಳಲ್ಲಿ ಗುಣಮಟ್ಟದ ಸೌಲಭ್ಯ: ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ ಸೇರಿದಂತೆ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಗುಣಮಟ್ಟದ ಮೂಲಸೌಕರ್ಯ, ಆಹಾರ ಮಳಿಗೆಗಳು, ಶ್ಯಾಕ್‌ಗಳು, ಸ್ವಚ್ಛತಾ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ತಾತ್ಕಾಲಿಕ ಹಾಗೂ ಅಸಂಘಟಿತ ವ್ಯವಸ್ಥೆಗಳ ಬದಲಿಗೆ, ಏಕರೂಪದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಖಚಿತ ಪಡಿಸುವ ಮಾದರಿಯನ್ನು ರೂಪಿಸಲಾಗುವುದು. ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್‌ನ ಮೊದಲ ಹಂತದ ಮೂಲ ಸೌಕರ್ಯ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

*ಸಿಆರ್‌ಝೆಡ್ ಅಡೆತಡೆಗಳಿಗೆ ಪರಿಹಾರ:ಕರಾವಳಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ನಿಯಮಗಳನ್ನು ಸರಳಗೊಳಿಸಿ ಪ್ರವಾಸೋದ್ಯಮ ಯೋಜನೆಗಳಿಗೆ ಉತ್ತೇಜನ ನೀಡಲಾಗುವುದು.

ನಿಯಮಗಳು ಪ್ರಮುಖ ಸವಾಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

ನೆರೆಯ ರಾಜ್ಯಗಳು ಇಂತಹ ನಿಯಮಗಳಡಿ ಹೇಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಿವೆ ಎಂಬುದನ್ನು ಅಧ್ಯಯನ ಮಾಡಿ, ಅಗತ್ಯ ಅನುಮತಿಗಳು ಮತ್ತು ಸ್ಪಷ್ಟೀಕರಣಗಳಿಗಾಗಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

*ವಾಟರ್ ಸ್ಪೋರ್ಟ್ಸ್‌ಗೆ ಮೊದಲು ಮೂಲಸೌಕರ್ಯ: ವಾಟರ್ ಸ್ಪೋರ್ಟ್ಸ್, ಸಾಹಸ ಪ್ರವಾಸೋದ್ಯಮ ಹಾಗೂ ಕರಾವಳಿ ಉತ್ಸವಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಮುನ್ನ, ರಸ್ತೆ ಸಂಪರ್ಕ, ಪ್ರವೇಶ ಮಾರ್ಗ, ಸುರಕ್ಷತೆ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಬಲಪಡಿಸಬೇಕಾಗಿದೆ. ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ ನಂತರ ಖಾಸಗಿ ಹೂಡಿಕೆ ಮತ್ತು ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿದೆ ಎಂದರು.

*ಹೋಮ್ ಸ್ಟೇ ಹೆಸರಿನಲ್ಲಿ ಲಾಡ್ಜ್‌ಗಳಿಗೆ ಅವಕಾಶವಿಲ್ಲ:

ಪ್ರವಾಸಿಗರಿಗೆ ಸ್ಥಳೀಯ ಜೀವನಶೈಲಿ ಮತ್ತು ಸಂಸ್ಕೃತಿಯ ಅನುಭವ ನೀಡುವ ನೈಜ ಹೋಮ್ ಸ್ಟೇ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುವುದು. ಆದರೆ ಹೋಂಸ್ಟೇ ಹೆಸರಿನಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಲಾಡ್ಜ್ ಅಥವಾ ಹೋಟೆಲ್ ಚಟುವಟಿಕೆ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೋಮ್ ಸ್ಟೇಯನ್ನು ಆರಂಭಿಸುವವರು ಸರಕಾರ ಸರಕಾರ ರೂಪಿಸಿರುವ ನಿಯಮಾವಳಿಗಳನ್ನು ಅನುಸರಿಸಲಿ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

*ಕ್ಯಾಸಿನೋ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕ್ಯಾಸಿನೋ ಸಂಸ್ಕೃತಿಯನ್ನು ಉತ್ತೇಜಿಸುವ ಯಾವುದೇ ಯೋಜನೆ ಸರಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಹೆಲ್ತ್ ಟೂರಿಸಮ್‌ಗೆ ಸರಕಾರದ ನೆರವು: ಮಂಗಳೂರು ಭಾಗದಲ್ಲಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದೆ. ಹೀಗಾಗಿ ಇಲ್ಲಿ ಹೆಲ್ತ್ ಟೂರಿಸಮ್ ಸಾಧ್ಯತೆಯ ಬಗ್ಗೆ ಸರಕಾರದ ನಿಲುವು ಏನು ? ಎಂಬ ಪ್ರಶ್ನೆಗೆ ಹೆಲ್ತ್ ಟೂರಿಸಮ್ ವಿಚಾರದಲ್ಲಿ ಇಲ್ಲಿ ಇರುವ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸರಕಾರ ಅದಕ್ಕೆ ಬೇಕಾದ ನೆರವು ನೀಡಲಿದೆ ಎಂದು ಸಚಿವ ಜಾರ್ಜ್ ನುಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments